ತಾನು ವಾಸಿಸುವ ಪ್ರದೇಶದ ಸಮೀಪದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಹಾಕಿದ್ದನ್ನು ಪ್ರತಿಭಟಿಸಿ ಆಟೋ ಚಾಲಕನೋರ್ವ ಅದರ ಮಧ್ಯೆಯೇ ಕುಳಿತು ವಿನೂತನವಾಗಿ ಪ್ರತಿಭಟಿಸಿದ್ದು, ಮಾಧ್ಯಮಗಳಲ್ಲಿ ಈ ವಿಚಾರ ಪ್ರಚಾರವಾಗುತ್ತಿದ್ದಂತೆ ಓಡೋಡಿ ಬಂದ ಪಾಲಿಕೆ ಸಿಬ್ಬಂದಿ ಸ್ವಚ್ಛತಾ ಕಾರ್ಯ ಕೈಗೊಂಡಿದ್ದಾರೆ.
ಇಂತಹದೊಂದು ಘಟನೆ ಮುಂಬೈನ ಕಲ್ಯಾಣ್ – ದೊಂಬಿವಿಲಿ ಮುನ್ಸಿಪಲ್ ಕಾರ್ಪೊರೇಷನ್ ವ್ಯಾಪ್ತಿಯಲ್ಲಿ ನಡೆದಿದ್ದು, ಆಟೋ ಚಾಲಕ 38 ವರ್ಷದ ಮನೋಜ್ ವಾಗ್ಮೋರೆ ಪ್ರತಿಭಟನೆ ನಡೆಸಿದ ಆಟೋ ಚಾಲಕರಾಗಿದ್ದಾರೆ. ಇವರ ನಿವಾಸದ ಸಮೀಪ ಕಸದ ದೊಡ್ಡ ರಾಶಿಯೇ ಬಿದ್ದಿದ್ದು ಈ ಕುರಿತು ಹಲವು ಬಾರಿ ಪಾಲಿಕೆ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಹೀಗಾಗಿ ಪ್ರತಿಭಟನೆಗೆ ನಿರ್ಧರಿಸಿದ ಅವರು ಶನಿವಾರದಂದು ಈಶಾನ್ಯ ಕಲ್ಯಾಣ್ ಭಾಗದ ಮಹಾತ್ಮ ಪುಲೆ ಚೌಕ್ ಬಳಿ ಕಸದ ರಾಶಿ ಮಧ್ಯೆ ಪ್ರತಿಭಟನೆಗೆ ಕುಳಿತಿದ್ದಾರೆ. ಈ ವಿಚಾರ ಅಧಿಕಾರಿಗಳ ಗಮನಕ್ಕೆ ಸೋಮವಾರ ಬಂದಿದ್ದು, ಕೂಡಲೇ ಸ್ಥಳಕ್ಕೆ ಧಾವಿಸಿದ ಅವರು ಸ್ವಚ್ಛತಾ ಕಾರ್ಯ ಕೈಗೊಂಡಿದ್ದಾರೆ. ಆದರೆ ಆಘಾತಕಾರಿ ಸಂಗತಿ ಎಂದರೆ ಮರುದಿನ ಮತ್ತೆ ಅಲ್ಲಿ ಕಸ ಹಾಕಲಾಗಿದೆ ಎಂದು ಹೇಳಲಾಗಿದೆ.
ಹೀಗಾಗಿ ಮನೋಜ್ ವಾಗ್ಮೋರೆ ಈಗ ತೆವಳಿಕೊಂಡೇ ಪಾಲಿಕೆ ಕಚೇರಿಗೆ ತೆರಳಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ. ಆದರೆ ಈ ಕುರಿತು ಪ್ರತಿಕ್ರಿಯಿಸಿರುವ ಪಾಲಿಕೆ ಅಧಿಕಾರಿಗಳು, ಸ್ಥಳೀಯರು ಕಸ ವಿಂಗಡಣೆ ಮಾಡದೆ ಎಲ್ಲೆಂದರಲ್ಲಿ ಬಿಸಾಡುತ್ತಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಓರ್ವ ಸಿಬ್ಬಂದಿಯನ್ನು ಸ್ಥಳದಲ್ಲಿ ನೇಮಿಸಿ ಕಸ ಎಸೆಯುವವರಿಗೆ ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ.