ರಾಯಚೂರು: ಪೆಟ್ರೋಲ್ ಸುರಿದುಕೊಂಡು ಆಟೋ ಚಾಲಕರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.
ಸುನೀಲ್ (39) ಆತ್ಮಹತ್ಯೆಗೆ ಶರಣಾದ ಆಟೋ ಚಾಲಕ. ಗಾಂಜಾ ಮಾರಾಟದ ಪ್ರಕರಣದಲ್ಲಿ ಪೊಲೀಸರಿಂದ ಕಿರುಕುಳ ಆರೋಪ ಮಾಡಿ ಆಟೋ ಚಾಲಕ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗಾಂಜಾ ಸೇವನೆ ಮಾಡುತ್ತಿದ್ದ ಮೃತ ಆಟೋ ಚಾಲಕ ಸುನೀಲ್ ನನ್ನು ಪೊಲೀಸರು ತನಿಖೆಯ ಭಾಗವಾಗಿ ಮಾಹಿತಿ ನೀಡುವಂತೆ ಒತ್ತಾಯಿಸಿದ್ದರು. ಗಾಂಜಾ ಮಾರಾಟಗಾರರ ಹೆಸರನ್ನು ಹೇಳು, ಇಲ್ಲದಿದ್ದರೆ 1 ಲಕ್ಷ ರೂಪಾಯಿ ಕೊಡು ಎಂದು ಒತ್ತಾಯಿಸಿದ್ದರು ಎಂದು ಸುನೀಲ್ ಪತ್ನಿ ಆರೋಪಿಸಿದ್ದಾರೆ. ಪೊಲೀಸರ ಕಿರುಕುಳಕ್ಕೆ ನೊಂದು ಡಿಸೆಂಬರ್ 31ರಂದು ಸುನೀಲ್ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದರು. ತಕ್ಷಣ ಅವರನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಸುನೀಲ್ ಚಿಕಿತ್ಸೆ ಫಲಿಸದೇ ರಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಪೊಲೀಸರ ಕಿರುಕುಳದಿಂದ ಆತ್ಮಹತ್ಯೆ ಎಂದು ಸುನೀಲ್ ಪತ್ನಿ ನೇತಾಜಿನಗರ ಪೊಲೀಸ್ ಠಾಣೆಯಲ್ಲಿ ಪೊಲೀಸರ ವಿರುದ್ಧವೇ ದೂರು ದಾಖಲಿಸಿದ್ದಾರೆ.