ಬೆಂಗಳೂರು: ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಆರಂಭಿಸಿದ ಶಕ್ತಿ ಯೋಜನೆಯಿಂದ ಒಳಗಾದ ಆಟೋ ಚಾಲಕರಿಗೆ ನೆರವು ನೀಡುವ ಬಗ್ಗೆ ಪರಿಶೀಲನೆ ನಡೆಸುವುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದ್ದಾರೆ.
ವಿಧಾನ ಪರಿಷತ್ ನಲ್ಲಿ ಜೆಡಿಎಸ್ ಸದಸ್ಯ ಗೋವಿಂದರಾಜು ಅವರ ಪರವಾಗಿ ಎಸ್.ಎಲ್. ಭೋಜೇಗೌಡ ಕೇಳಿದ ಪ್ರಶ್ನೆಗೆ ಸಚಿವರು ಉತ್ತರ ನೀಡಿದ್ದಾರೆ.
ಶಕ್ತಿ ಯೋಜನೆಯ ಆರಂಭಿಕ ಹಂತದಲ್ಲಿದ್ದು, ಯೋಜನೆಯಿಂದ ಆಟೋ ಚಾಲಕರ ದುಡಿಮೆಗೆ ತೊಂದರೆಯಾಗಿದ್ದರೆ ಪರಿಶೀಲನೆ ನಡೆಸಿ ಯಾವ ರೀತಿ ನೆರವು ನೀಡಬಹುದು ಎಂಬುದರ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ತಮ್ಮ ದುಡಿಮೆಗೆ ತೊಂದರೆ ಆಗಿದೆ ಎಂದು, ಆಟೋ ಚಾಲಕರಾಗಲೀ, ಸಂಘಟನೆಗಳಾಗಲಿ ದೂರು ನೀಡಿಲ್ಲ. ಮಾಧ್ಯಮಗಳಲ್ಲಿ ಆಟೋ ಚಾಲಕರಿಗೆ ಅನಾನುಕೂಲವಾದ ಬಗ್ಗೆ ಹೇಳಿಕೊಂಡಿದ್ದು, ತಮ್ಮ ಗಮನಕ್ಕೆ ಬಂದಿದೆ. ಈಗಷ್ಟೇ ಶಕ್ತಿ ಯೋಜನೆ ಆರಂಭವಾಗಿದ್ದು, ಇನ್ನೂ ಒಂದು ತಿಂಗಳು ಸಾಧಕ ಬಾಧಕ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.