’ಜಗತ್ತಿನ ಅತ್ಯಂತ ಅಪಾಯಕಾರಿ ಸಸಿ’ಯ ಮೇಲೆ ಬಿದ್ದ ಪರಿಣಾಮ ಆರು ತಿಂಗಳು ಪಡಬಾರದ ಪಾಡು ಅನುಭವಿಸಿದ ಕಥೆಯನ್ನು ಆಸ್ಟ್ರೇಲಿಯಾದ ಮಹಿಳೆಯೊಬ್ಬರು ಹಂಚಿಕೊಂಡಿದ್ದಾರೆ.
ಬೈಕ್‌ನಲ್ಲಿ ಸವಾರಿ ಮಾಡುತ್ತಿದ್ದ ವೇಳೆ ಆಯತಪ್ಪಿ ’ಗಿಂಪೀ-ಗಿಂಪೀ’ ಎಂಬ ಸಸಿ ಮೇಲೆ ಬಿದ್ದ ನವೋಮಿ ಲೆವಿಸ್ ಭಾರೀ ನೋವಿನಲ್ಲಿ ಆರು ತಿಂಗಳು ಕಳೆದಿದ್ದಾರೆ. ನೋವು ಅದ್ಯಾವ ಮಟ್ಟಿಗೆ ಸಹಿಸಿಕೊಳ್ಳಲಾರದ ಮಟ್ಟದಲ್ಲಿತ್ತೆಂದರೆ, ಆಗಾಗ ವಾಂತಿ ಮಾಡಿಕೊಳ್ಳುವ ಹಾಗೆ ಆಗುತ್ತಿತ್ತು ಎಂದು ನವೋಮಿ ತಿಳಿಸಿದ್ದಾರೆ.
ತಾನು ನಾಲ್ಕು ಮಕ್ಕಳನ್ನು ಹೆತ್ತಿದ್ದು, ಇದರಲ್ಲಿ ಮೂರು ಸಿಸೇರಿಯನ್ ಹಾಗೂ ಒಂದು ಸಹಜ ಹೆರಿಗೆ, ಅವ್ಯಾವೂ ಸಹ ಈ ಸಸಿಯ ಕಾಟದಿಂದ ಆದ ನೋವಿಗೆ ಸಮನಲ್ಲ ಎನ್ನುತ್ತಾರೆ ನವೋಮಿ. ತನ್ನ ಮಡದಿಯ ದೇಹಕ್ಕೆ ಹೊಕ್ಕಿದ್ದ ಸಸಿಯ ಚುಚ್ಚುವ ರೋಮಗಳನ್ನು ತೆರವುಗೊಳಿಸಲೆಂದು ಆಕೆಯ ಪತಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ.
ಆಸ್ಪತ್ರೆಯಲ್ಲಿ ಏಳು ನರಕಮಯ ದಿನಗಳ ಬಳಿಕ ನವೋಮಿ ಕೊನೆಗೂ ಮನೆಗೆ ಮರಳಿದ್ದಾರೆ. ಆದರೆ ಮುಂದಿನ ಆರು ತಿಂಗಳುಗಳ ಕಾಲ ಪೇನ್ ಕಿಲ್ಲರ್‌ಗಳು ಹಾಗೂ ಹೀಟ್ ಪ್ಯಾಕ್‌ಗಳ ಮೂಲಕ ಈ ನೋವಿನ ವಿರುದ್ಧ ಪ್ರತಿನಿತ್ಯ ಹೋರಾಡಿದ್ದಾರೆ ನವೋಮಿ. ಕಳೆದ ಡಿಸೆಂಬರ್‌ವರೆಗೂ ಪ್ರತಿನಿತ್ಯ ಈ ಔಷಧೋಪಚಾರ ಪಡೆಯುತ್ತಲೇ ಬಂದಿದ್ದಾರೆ ನವೋಮಿ. ಈಗಲೂ ಸಹ ನವೋಮಿಗೆ ತಮ್ಮ ಕಾಲುಗಳ ಕೆಲ ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುತ್ತದಂತೆ.