
ಡೆಮೆನ್ಶಿಯಾ (ಬುದ್ಧಿಮಾಂದ್ಯ) ಪೀಡಿತರ ನೆರವಿಗೆ ನಿಧಿ ಸಂಗ್ರಹಿಸುವ ಉದ್ದೇಶದಿಂದ 24 ಗಂಟೆಗಳಲ್ಲಿ 8,008 ಪುಲ್-ಅಪ್‌ಗಳನ್ನು ಮಾಡಿದ ಆಸ್ಟ್ರೇಲಿಯಾದ ವ್ಯಕ್ತಿಯೊಬ್ಬರು ಹೊಸ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಜಾಕ್ಸನ್ ಇಟಾಲಿಯಾನೋ ಹೆಸರಿನ ಈತ ಬುದ್ದಿಮಾಂದ್ಯರಾದ ನಾಲ್ಕು ಲಕ್ಷಕ್ಕೂ ಹೆಚ್ಚು ಮಂದಿಗಾಗಿ ಕೆಲಸ ಮಾಡುತ್ತಿರುವ ಪ್ರತಿಷ್ಠಾನವೊಂದಕ್ಕೆ ನಿಧಿ ಸಂಗ್ರಹಣೆಯಲ್ಲಿ ತೊಡಗಿದ್ದಾರೆ.
“ನಾನು ಮಾಡುವ ಪ್ರತಿಯೊಂದು ಪುಲ್‌ಅಪ್‌ಗೂ $1 ಸಂಗ್ರಹಿಸುವ ಉದ್ದೇಶ ಹೊಂದಿದ್ದೇನೆ. ಆದರೆ ನನಗೆ ನಿಮ್ಮ ಸಹಾಯ ಬೇಕು. ಡೆಮೆನ್ಶಿಯಾ ವಿರುದ್ಧದ ನನ್ನ ಈ ಯುದ್ಧದಲ್ಲಿ ದಯವಿಟ್ಟು ನನಗೆ ನೆರವಾಗಿ ನಿಲ್ಲಿ. ನನ್ನ ಕೆಲಸದಿಂದ ಸಂಗ್ರಹಿಸಲಾಗುವ ಎಲ್ಲಾ ನಿಧಿಯನ್ನೂ ಡೆಮೆನ್ಶಿಯಾ ಆಸ್ಟ್ರೇಲಿಯಾ ಪ್ರತಿಷ್ಠಾನಕ್ಕೆ ನೀಡುವ ಮೂಲಕ ಈ ರೋಗದಿಂದ ಬಳಲುತ್ತಿರುವ ಮಂದಿ, ಅವರ ಕುಟುಂಬಸ್ಥರು ಹಾಗೂ ಆರೈಕೆದಾರರಿಗೆ ಅಗತ್ಯವಿರುವ ಸೇವೆಗಳನ್ನು ಒದಗಿಸಲಾಗುವುದು,” ಎನ್ನುತ್ತಾರೆ ಜಾಕ್ಸನ್.
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಜಗತ್ತಿನಾದ್ಯಂತ 55 ದಶಲಕ್ಷಕ್ಕೂ ಹೆಚ್ಚು ಡೆಮೆನ್ಶಿಯಾ ಪೀಡಿತರಿದ್ದು, ಪ್ರತಿ ವರ್ಷ 10 ಲಕ್ಷದಷ್ಟು ಹೊಸ ಪ್ರಕರಣಗಳು ಸೇರ್ಪಡೆಯಾಗುತ್ತಿವೆ. ಸಾಮಾನ್ಯವಾಗಿ ವಯಸ್ಸಾದವರಿಗೆ ಡೆಮೆನ್ಶಿಯಾ ಬಾಧಿಸುತ್ತದೆ. ಆಲೋಚನೆ, ನೆನಪಿನ ಶಕ್ತಿ ಹಾಗೂ ಚಿಂತನೆಗಳ ಕ್ಷಮತೆಯನ್ನೇ ಕಸಿಯುವ ಡೆಮೆನ್ಶಿಯಾ, ಅದರಿಂದ ಬಾಧಿತರ ದಿನನಿತ್ಯದ ಬದುಕನ್ನೇ ದುಸ್ತರವನ್ನಾಗಿಸುತ್ತದೆ.