ಹಾರುವ ಕಾರಿನ ಪರಿಕಲ್ಪನೆ ಬಂದು ವರ್ಷಗಳೇ ಗತಿಸಿವೆ. ಈ ನಿಟ್ಟಿನಲ್ಲಿ ಕೆಲವು ದೇಶಗಳು ಇನ್ನೂ ಸಂಶೋಧನೆ ನಡೆಸುತ್ತಲಿವೆ. ಇದೀಗ ಅಲೌಡಾ ಏರೋನಾಟಿಕ್ಸ್ ಎಂಬ ಆಸ್ಟ್ರೇಲಿಯಾದ ಕಂಪೆನಿಯು ತನ್ನ ಮೊದಲ ಪ್ರಾಯೋಗಿಕ ಹಾರುವ ಕಾರಿನ ಪರಿಕಲ್ಪನೆಯನ್ನು ಅನಾವರಣಗೊಳಿಸಿದೆ, ಇದು “ವಿಶ್ವದ ಅತ್ಯಂತ ವೇಗದ ಹೈಡ್ರೋಜನ್ ಎಲೆಕ್ಟ್ರಿಕ್ VTOL ವಿಮಾನ” ಎಂದು ಕಂಪೆನಿ ಹೇಳಿಕೊಂಡಿದೆ.
ಪ್ರಪಂಚದಾದ್ಯಂತ, ಕಾರು ತಯಾರಕರು ಮತ್ತು ಸ್ವತಂತ್ರ ಏರೋನಾಟಿಕಲ್ ಕಂಪೆನಿಗಳು ಸ್ಥಳೀಯ ಪ್ರಯಾಣಕ್ಕಾಗಿ ಈ ರೀತಿ ಹಾರುವ ಕಾರು ಏರ್ ಟ್ಯಾಕ್ಸಿಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಇವುಗಳಲ್ಲಿ ಹೆಚ್ಚಿನವು ಸ್ವಾಯತ್ತ ವಾಹನ ಪರಿಕಲ್ಪನೆಗಳಾಗಿವೆ, ಆದರೆ ಏರ್‌ಸ್ಪೀಡರ್ ಇದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿರುವುದಾಗಿ ಕಂಪೆನಿ ಹೇಳಿದೆ. ಇದು ಮೂರನೇ ತಲೆಮಾರಿನ ಪರಿಕಲ್ಪನೆಯಾಗಿದ್ದು, ಈಗಾಗಲೇ 350 ಪರೀಕ್ಷಾ ಹಾರಾಟಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏರ್‌ಸ್ಪೀಡರ್ 4 ಅನ್ನು ಪ್ರಾಥಮಿಕವಾಗಿ ರೇಸಿಂಗ್‌ಗಾಗಿ ನಿರ್ಮಿಸಲಾಗಿದೆ. ಕಡಿಮೆ ಎತ್ತರದಲ್ಲಿ ಹಾರುವ ಸಾಮರ್ಥ್ಯವನ್ನು ಇದರಲ್ಲಿ ಅಳವಡಿಸಲಾಗಿದೆ. ರೇಸಿಂಗ್ ಕಾರು ಆಗಿರುವ ಹಿನ್ನೆಲೆಯಲ್ಲಿ ಕಡಿಮೆ ಎತ್ತರದಲ್ಲಿ ಹಾರುವ ಅಗತ್ಯ ಇರುವ ಕಾರಣ ಅದಕ್ಕೆ ಅನುಗುಣವಾಗಿ ಎಲ್ಲಾ ಎಂಜಿನ್ಗಳನ್ನು ಅಳವಡಿಸಲಾಗಿದೆ. ಶೀಘ್ರದಲ್ಲಿ ಇದು ಮಾರುಕಟ್ಟೆಯಲ್ಲಿಯೂ ಲಭ್ಯ ಇರಲಿದೆ ಎಂದು ಅಲೌಡಾ ಏರೋನಾಟಿಕ್ಸ್ ಕಂಪೆನಿ ಹೇಳಿದೆ.