ಆಸ್ಟ್ರೇಲಿಯಾದ ಕ್ರಿಕೆಟಿಗ ಮಿಚೆಲ್ ಮಾರ್ಷ್ ವಿಶ್ವಕಪ್ ಟ್ರೋಫಿಯ ಮೇಲೆ ಎರಡೂ ಕಾಲುಗಳನ್ನು ಇಟ್ಟುಕೊಂಡು ವಿಶ್ರಾಂತಿ ಪಡೆಯುತ್ತಿರುವ ಚಿತ್ರವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಈ ಫೋಟೋವನ್ನು ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ವ್ಯಾಪಕ ಟೀಕೆಗಳಿಗೆ ಕಾರಣವಾಗಿದೆ. ಗೆದ್ದ ಸಂಭ್ರಮದಲ್ಲಿ ಕಪ್ ಮೇಲೆ ಕಾಲಿಟ್ಟು ದುರ್ವರ್ತನೆ ಮೆರೆದಿದ್ದಾರೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.
ಆಸ್ಟ್ರೇಲಿಯಾ ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿದ ಕೆಲವೇ ಗಂಟೆಗಳ ನಂತರ ಈ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ನವೆಂಬರ್ 19 ರಂದು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ಆತಿಥೇಯ ಭಾರತವನ್ನು ಎದುರಿಸಿತು. ಆಸ್ಟ್ರೇಲಿಯಾ ತಂಡವು ಆರಾಮವಾಗಿ ಕುಳಿತು ಪರಸ್ಪರ ಮಾತನಾಡುತ್ತಿದ್ದ ಹೋಟೆಲ್ ಕೋಣೆಯಿಂದ ಈ ಫೋಟೋ ಹೊರ ಬಂದಿದೆ . ಚಿತ್ರ ವೈರಲ್ ಆದ ಕೂಡಲೇ, ಟ್ರೋಫಿಗೆ ‘ಅಗೌರವ’ ತೋರಿದ ಆಟಗಾರನನ್ನು ಜನರು ತರಾಟೆಗೆ ತೆಗೆದುಕೊಂಡಿದ್ದಾರೆ.
ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ಮುಗ್ಗರಿಸಿದ್ದು, ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಸೋಲು ಕಂಡಿದೆ.ಟೂರ್ನಿಯ ಎಲ್ಲಾ ಪಂದ್ಯಗಳಲ್ಲಿ ಭರ್ಜರಿ ಜಯ ಗಳಿಸಿದ ಭಾರತ ತಂಡ ಫೈನಲ್ ನಲ್ಲಿ ಸೋಲು ಕಂಡಿದ್ದು, ಅಭಿಮಾನಿಗಳ ವಿಶ್ವಕಪ್ ಟ್ರೋಫಿಯ ಕನಸು ಭಗ್ನವಾಗಿದೆ.