ಕಾರ್ತೀಕ ಮಾಸದ ಶುಕ್ಲಪಕ್ಷದಂದು ಆಚರಿಸುವ ಹಬ್ಬ ತುಳಸಿ ವಿವಾಹ. ಇದೇ ದಿನ ದೇವೋತ್ಥಾನ ಏಕಾದಶಿಯನ್ನು ಕೂಡ ಆಚರಿಸುತ್ತಾರೆ. ಏಕೆಂದರೆ ಆ ದಿನ ವಿಷ್ಣು 4 ತಿಂಗಳ ಸುದೀರ್ಘ ನಿದ್ರೆಯಿಂದ ಏಳುತ್ತಾನೆ ಎಂಬ ಪ್ರತೀತಿ ಇದೆ.
ಹಿಂದೂ ಸಂಪ್ರದಾಯದ ಪ್ರಕಾರ, ತುಳಸಿ ವಿವಾಹದಂದು ಮನೆಯಲ್ಲಿ ತುಳಸಿಯನ್ನು ಅಲಂಕರಿಸಿ ಸಾಲಿಗ್ರಾಮ ಅಥವಾ ನೆಲ್ಲಿಗಿಡದ ಜೊತೆ ತುಳಸಿಯ ವಿವಾಹವನ್ನು ಮಾಡುತ್ತಾರೆ. ಹೀಗೆ ತುಳಸಿ ವಿವಾಹವನ್ನು ಮಾಡಲು ಸರಿಯಾದ ಮುಹೂರ್ತ ಕೂಡ ಇರುತ್ತದೆ. ಅಂತಹ ಮುಹೂರ್ತ ಮತ್ತು ಪೂಜೆಯ ವಿಧಿವಿದಾನಗಳು ಇಲ್ಲಿವೆ.
ಈ ವರ್ಷ ನವೆಂಬರ್ 15ರಂದು ಸೋಮವಾರ ತುಳಸಿ ಮದುವೆ ನಡೆಯಲಿದೆ. ದ್ವಾದಶಿ ತಿಥಿ ಬೆಳಿಗ್ಗೆ 6.39ಕ್ಕೆ ಪ್ರಾರಂಭವಾಗಲಿದೆ. ದ್ವಾದಶಿ ತಿಥಿ ನವೆಂಬರ್ 16 ಬೆಳಿಗ್ಗೆ 8.01 ಕ್ಕೆ ಮುಕ್ತಾಯವಾಗಲಿದೆ.
ಈ ದಿನ ಮಹಿಳೆಯರು ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಬೇಕು. ಲಕ್ಷ್ಮಿಯ ವ್ರತ ಮಾಡಿ ವಿಷ್ಣುವಿನ ಆರಾಧನೆ ಮಾಡಿ ದೀಪ ಹಚ್ಚಬೇಕು. ವಿವಾಹಕ್ಕೆ ತುಳಸಿಗೆ ಕೆಂಪು ವಸ್ತ್ರ ಹೊದಿಸಿ ಮದುಮಗಳಂತೆ ಸಿಂಗರಿಸಬೇಕು. ತುಳಸಿಗೆ ಆರತಿ ಮಾಡಿ ವರನೊಂದಿಗೆ ತುಳಸಿಯ ಸಪ್ತಪದಿ ಇಡಿಸಬೇಕು. ನಂತರ ತುಳಸಿಗೆ ನೈವೇದ್ಯ ಅರ್ಪಿಸಬೇಕು. ಎಲ್ಲರಿಗೂ ತುಳಸಿಯ ಪ್ರಸಾದ ನೀಡಿ ನಂತರ ಸಂಜೆ ವಿಷ್ಣುಸಹಸ್ರನಾಮ ಓದಬೇಕು. ಈ ದಿನ ಬಡವರಿಗೆ ಆಹಾರ, ಬಟ್ಟೆ ದಾನ ಮಾಡಬೇಕು.
ಏಕಾದಶಿಯ ದಿನ ವಿಷ್ಣುವಿನ ನೈವೇದ್ಯಕ್ಕೆ ತುಳಸಿಯನ್ನು ಹಾಕುವುದನ್ನು ಮರೆಯಬೇಡಿ. ಏಕೆಂದರೆ ವಿಷ್ಣು ತುಳಸಿ ಹಾಕದೇ ಇರುವ ನೈವೇದ್ಯವನ್ನು ಸ್ವೀಕರಿಸುವುದಿಲ್ಲ. ಹಿಂದೂ ಧರ್ಮದಲ್ಲಿ ತುಳಸಿಯನ್ನು ‘ವಿಷ್ಣುಪ್ರಿಯ’, ವಿಷ್ಣುವಿನ ಪತ್ನಿಯ ರೂಪದಲ್ಲಿ ಪೂಜೆ ಮಾಡಲಾಗುತ್ತದೆ. ಈ ದಿನ ವಿಷ್ಣುವಿನ ಅವತಾರವಾದ ಸಾಲಿಗ್ರಾಮ ಅಥವಾ ನೆಲ್ಲಿಯ ಟೊಂಗೆಯೊಂದಿಗೆ ತುಳಸಿಯ ವಿವಾಹ ಜರುಗುತ್ತದೆ. ತುಳಸಿ ವಿವಾಹ ಮಾನ್ಸೂನ್ ಅಂತ್ಯವಾಗುವ ಮತ್ತು ಮದುವೆಯ ಮುಹೂರ್ತಗಳು ಆರಂಭವಾಗುವುದರ ಪ್ರತೀಕವಾಗಿದೆ. ಈ ವಿವಾಹದಿಂದ ಸಂಸಾರಕ್ಕೆ ವಿಷ್ಣುವಿನ ಕೃಪೆ ಇರುತ್ತದೆ ಮತ್ತು ವೈವಾಹಿಕ ಜೀವನದಲ್ಲಿ ಸುಖ, ಶಾಂತಿ ನೆಲೆಸುತ್ತದೆ.