ವಿಶ್ವದಲ್ಲಿ ಆರ್ಥಿಕ ಹಿಂಜರಿತ ತಲೆದೋರುವ ಭೀತಿ ಹಿನ್ನೆಲೆಯಲ್ಲಿ ದೊಡ್ಡ ದೊಡ್ಡ ಬಹು ರಾಷ್ಟ್ರೀಯ ಐಟಿ ಕಂಪನಿಗಳು ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ಮನೆಗೆ ಕಳುಹಿಸಿವೆ. ಗೂಗಲ್, ಫೇಸ್ಬುಕ್ ಒಡೆತನದ ಮೆಟಾ, ಮೈಕ್ರೋಸಾಫ್ಟ್, ಟ್ವಿಟ್ಟರ್ ಮೊದಲಾದವು ಈ ವಿಚಾರದಲ್ಲಿ ಮುಂಚೂಣಿಯಲ್ಲಿವೆ.
ಕಂಪನಿಗಳು ತೆಗೆದುಕೊಳ್ಳುತ್ತಿರುವ ಈ ಕ್ರಮದಿಂದಾಗಿ ಈಗಾಗಲೇ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ ಎನ್ನಲಾಗಿದ್ದು, ಹೀಗಾಗಿ ಈಗಷ್ಟೇ ಪದವಿ ಪೂರ್ಣಗೊಳಿಸಿ ಹೊರಬಂದವರು ತಮಗೆ ಉದ್ಯೋಗ ಸಿಗುತ್ತದೆಯೋ ಇಲ್ಲವೋ ಎಂಬ ಆತಂಕದಲ್ಲಿದ್ದರು.
ಹೆಸರಾಂತ ಐಟಿ ಕಂಪನಿಗಳ ಜೊತೆಗೆ ಸ್ಟಾರ್ಟಪ್ ಗಳು ಸಹ ಉದ್ಯೋಗಿಗಳನ್ನು ತೆಗೆಯುವುದರ ಜೊತೆಗೆ ನೇಮಕಾತಿಗೂ ಹಿಂದೆ ಮುಂದೆ ನೋಡುತ್ತಿದ್ದವು. ಆದರೆ ಉದ್ಯೋಗ ಪೋರ್ಟಲ್ naukri.com ಪ್ರಕಾರ 2023ರ ಜನವರಿಗೆ ಹೋಲಿಸಿದರೆ ಫೆಬ್ರವರಿ ತಿಂಗಳಿನಲ್ಲಿ ಉದ್ಯೋಗ ನೇಮಕಾತಿಯಲ್ಲಿ ಉತ್ತಮ ಬೆಳವಣಿಗೆ ಕಂಡು ಬಂದಿದೆ ಎನ್ನಲಾಗಿದೆ.
ಅದರಲ್ಲೂ ಐಟಿ ವಲಯದಲ್ಲಿ ಚೇತರಿಕೆ ಕಂಡು ಬಂದಿದ್ದು ಫೆಬ್ರವರಿ ತಿಂಗಳಿನಲ್ಲಿ ಶೇಕಡಾ ಹತ್ತರಷ್ಟು ಏರಿಕೆಯಾಗಿದೆ. ಜೊತೆಗೆ ಕ್ಲೌಡ್ ಸಿಸ್ಟಮ್ಸ್, ಅನಾಲಿಟಿಕ್ಸ್ ಮ್ಯಾನೇಜರ್, ಡೇಟಾ ಇಂಜಿನಿಯರ್, QA ಟೆಸ್ಟರ್ಗಳ ನೇಮಕಾತಿಗೆ ಬೇಡಿಕೆ ಕಂಡು ಬಂದಿದೆ ಎನ್ನಲಾಗಿದೆ. ಹೀಗಾಗಿ ಭಾರತದ 5 ಪ್ರಮುಖ ಕಂಪನಿಗಳು ದೊಡ್ಡ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಮುಂದೆ ಬಂದಿವೆ.
ಲೆಕ್ಕ ಪತ್ರ ನಿರ್ವಹಣೆ ಮತ್ತು ಸಲಹಾ ಸಂಸ್ಥೆಯಾದ ಪ್ರೈಸ್ ವಾಟರ್ ಹೌಸ್ ಕೂಪರ್ಸ್ ಕಂಪನಿ ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸುವ ಸಲುವಾಗಿ ಮುಂದಿನ ಐದು ವರ್ಷಗಳಲ್ಲಿ 30,000 ಮಂದಿಯನ್ನು ನೇಮಕ ಮಾಡಿಕೊಳ್ಳುತ್ತದೆ ಎನ್ನಲಾಗಿದೆ. ಪ್ರಸ್ತುತ 50,000 ಉದ್ಯೋಗಿಗಳನ್ನು ಹೊಂದಿರುವ ಈ ಸಂಸ್ಥೆ ಇದನ್ನು 80,000 ಕ್ಕೆ ಏರಿಸುವ ಗುರಿ ಹೊಂದಿದೆ. ಕಳೆದ ವರ್ಷ ಭುವನೇಶ್ವರ, ಜೈಪುರ ಹಾಗೂ ನೋಯ್ಡಾದಲ್ಲೂ ಕಚೇರಿ ತೆರೆದಿರುವ ಈ ಕಂಪೆನಿ ಸಹಾಯಕರಿಂದ ಮ್ಯಾನೇಜರ್ವರೆಗೆ ವಿವಿಧ ಹಂತಗಳಲ್ಲಿ ನೇಮಕಾತಿ ಮಾಡಿಕೊಳ್ಳಲು ಮುಂದಾಗಿದೆ.
ಇನ್ನು ಬೆಂಗಳೂರು ಮೂಲದ ಬೃಹತ್ ಐಟಿ ಕಂಪನಿ ಇನ್ಫೋಸಿಸ್ ಕೂಡ 4,263 ಉದ್ಯೋಗಿಗಳ ನೇಮಕಾತಿಗೆ ಮುಂದಾಗಿದೆ ಎಂದು ವೃತ್ತಿಪರ ನೆಟ್ವರ್ಕಿಂಗ್ ವೆಬ್ಸೈಟ್ ಲಿಂಕ್ಡ್ ಇನ್ ತಿಳಿಸಿದೆ. ಸಾಫ್ಟ್ವೇರ್, ಕ್ವಾಲಿಟಿ ಆನಾಲಿಸಿಸ್ ಸೇರಿದಂತೆ ಹಲವು ವಿಭಾಗಗಳಲ್ಲಿ ಈ ನೇಮಕಾತಿ ನಡೆಯಲಿದೆ.
ಇನ್ನು ಏರ್ ಇಂಡಿಯಾ ಕೂಡ ತನ್ನ ಜಾಲವನ್ನು ಮತ್ತಷ್ಟು ವಿಸ್ತರಿಸಿಕೊಳ್ಳಲು ಮುಂದಾಗಿದ್ದು ಹೀಗಾಗಿ 900 ಹೊಸ ಪೈಲೆಟ್ ಗಳು ಮತ್ತು 4 ಸಾವಿರಕ್ಕೂ ಅಧಿಕ ಕ್ಯಾಬಿನ್ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಮುಂದಾಗಿದೆ. ಜೊತೆಗೆ ನಿರ್ವಹಣಾ ಇಂಜಿನಿಯರ್ ಗಳ ನೇಮಕಾತಿಗೂ ಒತ್ತು ನೀಡಲು ನಿರ್ಧರಿಸಿದೆ.
ಮತ್ತೊಂದು ಬೃಹತ್ ಐಟಿ ಕಂಪನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಕೂಡ ತನ್ನ ನೇಮಕಾತಿಯನ್ನು ಮುಂದುವರಿಸಿದ್ದು, ನಾಲ್ಕನೇ ತ್ರೈಮಾಸಿಕ ವೇಳೆಗೆ ಸಾವಿರಾರು ಜನರನ್ನು ಕೆಲಸಕ್ಕೆ ತೆಗೆದುಕೊಳ್ಳಲು ತೀರ್ಮಾನಿಸಿದೆ.
ಇನ್ನು ಪ್ರಮುಖ ಐಟಿ ಕಂಪನಿ ವಿಪ್ರೊ ಕೂಡಾ 3,292 ಉದ್ಯೋಗಿಗಳ ನೇಮಕಾತಿಗೆ ಮುಂದಾಗಿದ್ದು, ಸಾಫ್ಟ್ವೇರ್, ಐಟಿ ಮತ್ತು ಮಾಹಿತಿ ಭದ್ರತೆ, ಹಣಕಾಸು ಸೇರಿದಂತೆ ವಿವಿಧ ವಿಭಾಗಗಳಲ್ಲಿ ಈ ನೇಮಕಾತಿ ನಡೆಯಲಿದೆ. ಮಾರ್ಕೆಟ್ ಲೀಡ್ ಗೆ ಬೇಕಾಗುವಂತಹ ಹುದ್ದೆಗಳಿಗೂ ನೇಮಕಾತಿ ನಡೆಯಲಿದೆ.