alex Certify ಹೋಂ-ಸ್ಟೇ ಮಾಲೀಕರ ಗಮನಕ್ಕೆ : ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಕಡ್ಡಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೋಂ-ಸ್ಟೇ ಮಾಲೀಕರ ಗಮನಕ್ಕೆ : ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಕಡ್ಡಾಯ

ಸರ್ಕಾರದ ಆದೇಶದನ್ವಯ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಹೋಂ-ಸ್ಟೇಗಳು ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ. ಈ ಸಂಬಂಧ ಹೋಂ-ಸ್ಟೇ ಮಾಲೀಕರಿಗೆ ಸಾಕಷ್ಟು ಕಾಲಾವಕಾಶ ನೀಡಿದರೂ ಬಹಳಷ್ಟು ಹೋಂ-ಸ್ಟೇಗಳು ನೋಂದಣಿಯಾಗಿರುವುದಿಲ್ಲ. ಇದನ್ನು ಜಿಲ್ಲಾಡಳಿತವು ಗಂಭೀರವಾಗಿ ಪರಿಗಣಿಸಿದ್ದು, ನೋಂದಣಿಯಾಗದೆ ಹೋಂ-ಸ್ಟೇಗಳು ಕಡ್ಡಾಯವಾಗಿ ನೋಂದಾಯಿಸಿಕೊಳ್ಳಲು ಸೂಚಿಸಲಾಗಿದೆ ಹಾಗೂ ಪ್ರವಾಸೋದ್ಯಮ ಇಲಾಖೆಯಡಿಯಲ್ಲಿ ನೋಂದಣಿಗೊಳ್ಳದೆ ನಿಯಮಬಾಹಿರವಾಗಿ ಕಾರ್ಯ ನಿರ್ವಹಿಸುತ್ತಿರುವ ಹೋಂ-ಸ್ಟೇಗಳ ವಿರುದ್ದ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದೆ.

ಪ್ರವಾಸೋದ್ಯಮ ಇಲಾಖೆಯಿಂದ ಈಗಾಗಲೇ ಪರವಾನಿಗೆ ಪಡೆದು ಕಾರ್ಯ ನಿರ್ವಹಿಸುತ್ತಿರುವ ಮತ್ತು ಪರವಾನಿಗೆ ಅವಧಿಯು 5 ವರ್ಷಗಳಿಗೆ ಮುಕ್ತಾಯಗೊಳ್ಳುತ್ತಿರುವ ಹೋಂ-ಸ್ಟೇಗಳು ಪರವಾನಿಗೆಯನ್ನು ನವೀಕರಿಸುವಂತೆ ಈ ಮೂಲಕ ತಿಳಿಸಲಾಗಿದೆ.

ಹೋಂ-ಸ್ಟೇಗಳ ನೋಂದಣಿಗಾಗಿ ಪ್ರವಾಸೋದ್ಯಮ ಇಲಾಖೆಯು ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಅಂತರ್ಜಾಲ ತಾಣ http://karnatakatourism.org/ ಅಥವಾ https://kttf.karnatakatourism.org/ ಮುಖಾಂತರ ಆನ್ಲೈನ್ನಲ್ಲಿ ನೋಂದಣಿ ಮಾಡಿಕೊಳ್ಳಲು ತಿಳಿಸಲಾಗಿದೆ.

ಆನ್ಲೈನ್ನಲ್ಲಿ ಹೋಂ-ಸ್ಟೇ ನೋಂದಣಿ ಮಾಡಲು ಭಾವಚಿತ್ರ, ಆಧಾರ್ ಕಾರ್ಡ್, ಹೋಂ-ಸ್ಟೇ ಹೊರಾಂಗಣ, ಒಳಾಂಗಣ, ಸ್ನಾನಗೃಹ ಹಾಗೂ ಕೊಠಡಿ ಛಾಯಾಚಿತ್ರಗಳು. ಹೋಂ-ಸ್ಟೇ ಮಾಲೀಕತ್ವದ ದಾಖಲಾತಿ, ಪೊಲೀಸ್ ಇಲಾಖೆಯಿಂದ ನೀಡಲಾಗಿರುವ ನಿರಾಕ್ಷೇಪಣಾ ಪತ್ರ, ಸ್ಥಳೀಯ ಸಂಸ್ಥೆಯವರುಗಳು ನೀಡಿರುವ ನಿರಾಕ್ಷೇಪಣಾ ಪತ್ರ. ವಾಸಸ್ಥಳ ದೃಢೀಕರಣ ಪತ್ರ ಹಾಗೂ ನೋಂದಣಿ ಶುಲ್ಕ ರೂ.500 ಸ್ಕ್ಯಾನ್ ಮಾಡಿದ ದಾಖಲಾತಿಗಳನ್ನು ಅಂತರ್ಜಾಲ ತಾಣದಲ್ಲಿ ಅಪ್ಲೋಡ್ ಮಾಡಬೇಕಾಗಿರುತ್ತದೆ.

ಹೋಂ-ಸ್ಟೇ ಪರಿವೀಕ್ಷಣೆಗಾಗಿ ಅಧಿಕಾರಿಗಳು ಭೇಟಿ ನೀಡಿದಾಗ ಹೋಂ-ಸ್ಟೇ ಪ್ರಮಾಣಪತ್ರ ಅಥವಾ ಹೋಂ-ಸ್ಟೇ ನೋಂದಣಿಗಾಗಿ ಅರ್ಜಿ ಸಲ್ಲಿಸಿರುವ ದಾಖಲಾತಿ ಹಾಜರುಪಡಿಸುವುದು. ಇಲ್ಲವಾದಲ್ಲಿ ಹೋಂ-ಸ್ಟೇ ಜಾಗದ ಮಾಲೀಕರ ಮೇಲೆ ಕ್ರಮ ಜರುಗಿಸಲಾಗುವುದು.

ಈಗಾಗಲೇ ಪರವಾನಿಗೆ ಪಡೆದು ಹೋಂ-ಸ್ಟೇ ನಡೆಸುತ್ತಿರುವ ಮಾಲೀಕರು ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ. ಬರುವಂತಹ ಅತಿಥಿಗಳ ವಾಹನ ಸಂಖ್ಯೆ, ಗುರುತಿನ ಚೀಟಿಯ ವಿವರಗಳನ್ನು ನೋಂದಣಿ ಪುಸ್ತಕದಲ್ಲಿ ಕಡ್ಡಾಯವಾಗಿ ನಮೂದಿಸುವುದು. ಹೋಂ-ಸ್ಟೇಗಳಲ್ಲಿ ಯಾವುದೇ ರೀತಿಯ ಕಾನೂನು ಬಾಹೀರ ಅನಧಿಕೃತ ಚಟುವಟಿಕೆಗಳನ್ನು ನಡೆಸಬಾರದು.

ಪ್ರಥಮ ಚಿಕಿತ್ಸೆ ಪೆಟ್ಟಿಗೆ ಹಾಗೂ ಬೆಂಕಿ ನಂದಕವನ್ನು ಕಡ್ಡಾಯವಾಗಿ ಹೋಂ-ಸ್ಟೇನಲ್ಲಿ ಅಳವಡಿಸುವುದು. ಹೋಂ-ಸ್ಟೇನಲ್ಲಿರುವ ಸಿ.ಸಿ ಟಿವಿಯ 45 ದಿನಗಳ ಪುಟೇಜ್ಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದು ಹಾಗೂ ಸಿಸಿ ಟಿವಿಯನ್ನು ಸರಿಯಾಗಿ ನಿರ್ವಹಿಸುವುದು.

ಇವುಗಳಲ್ಲದೇ ಮಾಹಿತಿ ಇಲ್ಲದೆ ಅನಧೀಕೃತವಾಗಿ ನಡೆಸುತ್ತಿರುವಂತಹ ಹೋಂ-ಸ್ಟೇಗಳ ಬಗ್ಗೆ ಸಾರ್ವಜನಿಕರು ದೂರು/ ಮಾಹಿತಿ ಇದ್ದಲ್ಲಿ ಅವುಗಳ ವಿವರಗಳನ್ನು ಪತ್ರ ಮುಖೇನ ಉಪ ನಿರ್ದೇಶಕರ ಕಚೇರಿ, ಪ್ರವಾಸೋದ್ಯಮ ಇಲಾಖೆ, ಸ್ಟುವರ್ಟ್ಹಿಲ್ ರಸ್ತೆ, ಮಡಿಕೇರಿ, ಕೊಡಗು ಜಿಲ್ಲೆ 571201 ದೂರವಾಣಿ ಸಂಖ್ಯೆ:08272-200519 ಅಥವಾ ಈ-ಮೇಲ್ : adkodagutourism@gmail.comಗೆ ತಿಳಿಸಬಹುದು.

ಅದರಂತೆ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೋಟೆಲ್, ರೆಸ್ಟೋರೆಂಟ್, ರೆಸಾರ್ಟ್, ಟೂರ್ಸ್ ಅಂಡ್ ಟ್ರಾವೆಲ್ ಏಜೆನ್ಸಿ ಹಾಗೂ ಮನರಂಜನಾ ಪಾರ್ಕ್ಗಳ ಉದ್ದಿಮೆದಾರರು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ವೆಬ್ಸೈಟ್ http://kttf.karnatakatourism.org/ ಅಥವಾ http://www.karnatakatourism.org/ ನಲ್ಲಿ ತಮ್ಮ ಸಂಸ್ಥೆಯನ್ನು ನೋಂದಣಿ ಮಾಡಿಕೊಳ್ಳುವಂತೆ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾದ ಅನಿತಾ ಭಾಸ್ಕರ್ ಅವರು ತಿಳಿಸಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...