ಕಲಬುರಗಿ: ಪಹಣಿ -ಆಧಾರ್ ಲಿಂಕ್ ಮಾಡಲು ಜುಲೈಗೆ ಅಂತಿಮ ಗಡುವು ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಕಲಬುರಗಿ ಡಿಸಿ ಕಚೇರಿ ಸಭಾಂಗಣದಲ್ಲಿ ಕಂದಾಯ ಇಲಾಖೆ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವರು, ರಾಜ್ಯದಲ್ಲಿ 4 ಕೋಟಿ ಪಹಣಿಗಳಲ್ಲಿ ಈಗಲೇ 1.70 ಕೋಟಿ ಪಹಣಿಗೆ ಆಧಾರ್ ಸೀಡಿಂಗ್ ಮಾಡಲಾಗಿದೆ. ಉಳಿದವುಗಳನ್ನು ಅಭಿಯಾನದ ಮೂಲಕ ಜುಲೈ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ಸೂಚಿಸಿದ್ದಾರೆ.
ಆಧಾರ್ –ಪಹಣಿ ಜೋಡಣೆಯಿಂದ ವಂಚನೆಗೆ ತಡೆ ಹಾಕಬಹುದು, ಇದರೊಂದಿಗೆ ಪರಿಹಾರ, ವರ್ಗಾವಣೆ ಪ್ರಕ್ರಿಯೆ ಸರಳವಾಗುತ್ತದೆ. ಜನರಿಗೆ ಸರ್ಕಾರಿ ಸೇವೆ ಬೇಗನೆ ಸಿಗುವಂತಾಗುತ್ತದೆ ಎಂದು ತಿಳಿಸಿದ್ದಾರೆ.
ಆಧಾರ್ ಸೀಡಿಂಗ್ ಪ್ರಕ್ರಿಯೆಯಲ್ಲಿ ಉತ್ತಮ ಪ್ರಗತಿ ಸಾಧಿಸಿರುವುದಕ್ಕೆ ಸಂತೋಷಪಡಿಸಿದ ಅವರು, ಉತ್ತಮ ಕಾರ್ಯ ನಿರ್ವಹಣೆ ತೋರಿದ ಗ್ರಾಮ ಲೆಕ್ಕಾಧಿಕಾರಿಗಳನ್ನು ಹುರಿದುಂಬಿಸಲು ಮೊದಲನೇ ಹಂತದಲ್ಲಿ ಅವರಿಗೆ ಲ್ಯಾಪ್ಟಾಪ್ ವಿತರಿಸಬೇಕು ಎಂದು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟೀರಿಯವರಿಗೆ ನಿರ್ದೇಶನ ನೀಡಿದ್ದಾರೆ.