ಬೆಂಗಳೂರು : ಸರ್ವರಿಗೂ ಸ್ವಾತಂತ್ಯೋತ್ಸವ-2024 ರ ಸಂಭ್ರಮಾಚರಣೆಯ ಶುಭಾಶಯಗಳು…..ಬೆಂಗಳೂರಿಗರೇ ಗಮನಿಸಿ ಸ್ವಾತಂತ್ಯೋತ್ಸವದ ಹಿನ್ನೆಲೆ ನಾಳೆ ಬೆಂಗಳೂರಿನಲ್ಲಿ ಹಲವು ಕಡೆ ರಸ್ತೆ ಸಂಚಾರ ನಿಷೇಧಿಸಲಾಗಿದ್ದು, ಬದಲಿ ಮಾರ್ಗದ ಬಗ್ಗೆ ಮಾಹಿತಿ ನೀಡಲಾಗಿದೆ.
ದಿನಾಂಕ: 15/08/2024 ರಂದು ಬೆಳಗ್ಗೆ 09-00 ಗಂಟೆಗೆ ಕಬ್ಬನ್ ರಸ್ತೆಯಲ್ಲಿರುವ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಕವಾಯತು ಮೈದಾನದಲ್ಲಿ ಸ್ವಾತಂತ್ರೋತ್ಸವ ದಿನಾಚರಣೆ-2024 ರ ಅಂಗವಾಗಿ ವಿಶೇಷ ಕವಾಯತು ನಡೆಯಲಿದ್ದು, ಕರ್ನಾಟಕ ರಾಜ್ಯದ ಮಾನ್ಯ ಮುಖ್ಯ ಮಂತ್ರಿಗಳು ಧ್ವಜಾರೋಹಣ ಮಾಡಿ ಗೌರವವಂದನೆ ಸ್ವೀಕರಿಸಲಿದ್ದಾರೆ.
ಇದರ ಅಂಗವಾಗಿ ಬೆಂಗಳೂರು ನಗರ ಸಂಚಾರ ಪೊಲೀಸರು ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಕವಾಯತು ಮೈದಾನದ ಒಳಗಡೆ ಮತ್ತು ಸುತ್ತ-ಮುತ್ತಲು ಈ ಕೆಳಕಂಡಂತೆ ಸಂಚಾರ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಲಾಗಿದೆ.
1. ಕಾರ್ ಪಾಸ್ಗಳನ್ನು ಹೊಂದಿರುವ ಎಲ್ಲಾ ಆಹ್ವಾನಿತರು ಅವರುಗಳ ಪಾಸ್ಗಳಲ್ಲಿ ನಿಗದಿಪಡಿಸಿದ ಗೇಟ್ಗಳಲ್ಲಿ ಇಳಿದು ಕೊಳ್ಳುವುದು ಹಾಗೂ ಪಾಸ್ನಲ್ಲಿ ನಿಗದಿಪಡಿಸಿರುವ ಸ್ಥಳಗಳಲ್ಲಿ ವಾಹನಗಳನ್ನು ನಿಲುಗಡೆ ಮಾಡುವಂತೆ ಕೋರಲಾಗಿದೆ.
2. ತುರ್ತು ಸೇವಾ ವಾಹನಗಳಾದ ಅಂಬುಲೆನ್ಸ್, ಅಗ್ನಿಶಾಮಕ ದಳದ ವಾಹನಗಳು, ನೀರಿನ ಟ್ಯಾಂಕರ್, ಕೆ.ಎಸ್.ಆರ್.ಪಿ., ಕ್ಯೂ.ಆರ್.ಟಿ, ಬಿ.ಬಿ.ಎಂ.ಪಿ. ಹಾಗೂ ಪಿ.ಡಬ್ಲ್ಯೂ.ಡಿ ವಾಹನಗಳು ಪ್ರವೇಶ ದ್ವಾರ-2 ರ ಮುಖಾಂತರ ಪರೇಡ್ ಮೈದಾನದ ಒಳಗೆ ಪ್ರವೇಶಿಸಿ ನಂತರ ಪೋರ್ಟ್ ವಾಲ್ ಹಿಂಭಾಗದಲ್ಲಿ (ದಕ್ಷಿಣದ ಕಡೆಗೆ) ವಾಹನಗಳನ್ನು ನಿಲುಗಡೆ ಮಾಡಬಹುದಾಗಿದೆ.
3. ಕಾರ್ಯಕ್ರಮಕ್ಕೆ ಬರುವ ಎಲ್ಲಾ ಮಾಧ್ಯಮದವರ ವಾಹನಗಳು ಪ್ರವೇಶ ದ್ವಾರ-4 ರ ಮೂಲಕ ಒಳ ಪ್ರವೇಶಿಸಿ ಮೈದಾನದ ಪೂರ್ವ ಭಾಗದಲ್ಲಿ ನಿಗದಿತ ಸ್ಥಳದಲ್ಲಿ ವಾಹನ ನಿಲುಗಡೆ ಮಾಡಬಹುದಾಗಿದೆ.
ವಾಹನ ನಿಲುಗಡೆ ರಸ್ತೆಗಳು
1. ಸೆಂಟ್ರಲ್ ಸ್ಟ್ರೀಟ್, ಅನಿಲ್ ಕುಂಬ್ಳೆ ವೃತ್ತದಿಂದ ಶಿವಾಜಿನಗರ ಬಸ್ ನಿಲ್ದಾಣದವರೆಗೆ.
2. ಕಬ್ಬನ್ ರಸ್ತೆ, ಸಿ.ಟಿ.ಓ. ವೃತ್ತದಿಂದ ಕೆ.ಆರ್.ರಸ್ತೆ & ಕಬ್ಬನ್ರಸ್ತೆ ಜಂಕ್ಷನ್ ವರೆಗೆ.
3. ಎಂ.ಜಿ.ರಸ್ತೆ, ಆನಿಲ್ ಕುಂಬ್ಳೆ ವೃತ್ತದಿಂದ ಕ್ಲೀನ್ಸ್ ವೃತ್ತದವರೆಗೆ.
ಬೆಂಗಳೂರು ಸಂಚಾರ ಪೊಲೀಸರಿಂದ ಸಾರ್ವಜನಿಕ ಬಂಧುಗಳಲ್ಲಿ ವಿಶೇಷ ಮನವಿ.
1. ಮಾಣಿಕ್ ಷಾ ಪರೇಡ್ ಮೈದಾನ ಹಾಗೂ ಸುತ್ತಮುತ್ತ ವಾಹನಗಳ ನಿಲುಗಡೆಗೆ ಸ್ಥಳಾವಕಾಶ ಕೊರತೆ ಇರುವುದರಿಂದ ಹಾಗೂ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಸಾರ್ವಜನಿಕರು, ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮತ್ತು ಮೆಟ್ರೋ ಸೇವೆಯನ್ನು ಬಳಸಲು ಕೋರಲಾಗಿದೆ.
2. ಯಾವುದೇ ಸಹಾಯಕ್ಕಾಗಿ ಪೊಲೀಸರು ಸದಾ ನಿಮ್ಮೊಂದಿಗಿರುತ್ತಾರೆ. ದಯವಿಟ್ಟು ಸ್ಥಳದಲ್ಲಿರುವ ಪೊಲೀಸರನ್ನು ಸಂಪರ್ಕಿಸಿ ಅಥವಾ 112 ಗೆ ಕರೆ ಮಾಡಿ.
3. ಸ್ವಾತಂತ್ರೋತ್ಸವ ದಿನಾಚರಣೆ ಸಂಭ್ರಮಾಚರಣೆಯನ್ನು ಯಶಸ್ವಿಗೊಳಿಸಲು ತಮ್ಮ ಸಹಕಾರವನ್ನು ಬಯಸುತ್ತೇವೆ ಎಂದು ಸಂಚಾರಿ ಪೊಲೀಸರು ಮಾಹಿತಿ ನೀಡಿದ್ದಾರೆ.