ಬೆಂಗಳೂರು : ವಾಯುಭಾರ ಕುಸಿತದಿಂದಾಗಿ ಬೆಂಗಳೂರಿನಾದ್ಯಂತ ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಕೇಂದ್ರ ಕಚೇರಿಯ ಕಂಟ್ರೋಲ್ರೂಂನಲ್ಲಿ ಬೆಂಗಳೂರಿನ ಸಾರ್ವಜನಿಕರ ಕುಂದುಕೊರತೆಗಳನ್ನು ವಿಚಾರಿಸಿ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿದರು.
ವರ್ಣಮಿತ್ರ ವೆಬ್ಸೈಟ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಮುನ್ಸೂಚನೆ ನೀಡಲಾಗುತ್ತದೆ. 1533 ಟೋಲ್ ಫ್ರೀ ಸಂಖ್ಯೆ 24ಗಂಟೆಗಳ ಕಾಲ ಸಕ್ರಿಯವಾಗಿರುತ್ತದೆ. ನೇರವಾಗಿ ಕರೆ ಮಾಡಿ ನಾಗರಿಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬಹುದಾಗಿದೆ.
* ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ಎಲ್ಲಾ ಕಡೆ 24/7 ಕಂಟ್ರೋಲ್ ರೂಂಗಳು ಕೆಲಸ ಮಾಡಬೇಕೆನ್ನುವ ಸೂಚನೆ ನೀಡಿದ್ದೇನೆ.
* ಕರ್ನಾಟಕ ಸರ್ಕಾರವೂ ಸಹ ಮುಂಜಾಗ್ರತಾ ಕ್ರಮವಾಗಿ ಶಾಲೆಗಳಿಗೆ ರಜೆ ಘೋಷಿಸಿದೆ.
* ಸಾಮಾನ್ಯವಾಗಿ 5ಎಂಎಂ ಮಳೆ ಬೀಳುತ್ತದೆ. ಆದರೆ 15 ಎಂಎಂ ಮಳೆಯಾಗಿದೆ. 228% ಹೆಚ್ಚುವರಿ ಮಳೆಯಾಗಿರುವುದಾಗಿ ತಿಳಿದುಬಂದಿದೆ. ವಿಶೇಷವಾಗಿ ಯಲಹಂಕ ಪಶ್ಚಿಮ, ಪೂರ್ವ ವಲಯಗಳಲ್ಲಿ ಗರಿಷ್ಠ ಮಳೆಯಾಗಿದೆ. ಮಹದೇವಪುರ, ದಾಸರಹಳ್ಳಿ, ಬೆಂಗಳೂರು ದಕ್ಷಿಣ ಮೊದಲಾದ ಕಡೆ ಹೆಚ್ಚು ಮಳೆಯಾಗಿದೆ.
* 142 ಕಡೆ ಮನೆಗಳಿಗೆ ನೀರು ನುಗ್ಗಿರುವ ಬಗ್ಗೆ ದೂರುಗಳು ಬಂದಿವೆ. ಸುಮಾರು 30 ಮರಗಳು ಬಿದ್ದಿರುವ ಮಾಹಿತಿ ಬಂದಿದೆ. 22 ಕಡೆ ಈಗಾಗಲೇ ಕ್ಲಿಯರ್ ಮಾಡಿದ್ದೇವೆ. 35 ಕಡೆ ಕೊಂಬೆಗಳು ಬಿದ್ದು ಟ್ರಾಫಿಕ್ ಸಮಸ್ಯೆ ಆಗಿತ್ತು, ಅವನ್ನೂ ಸರಿಪಡಿಸಿದ್ದೇವೆ.
* 3 ದಿನಗಳ ಕಾಲ ನಾಗರಿಕರು ಜಾಗರೂಕರಾಗಬೇಕು.