ಮಲಪ್ಪುರಂ : ಶಬರಿಮಲೆ ಸನ್ನಿಧಾನದಲ್ಲಿ ಒಂಬತ್ತು ವರ್ಷದ ಭಕ್ತೆಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ 62 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ಮಗುವಿನ ಕುಟುಂಬ ನೀಡಿದ ದೂರಿನ ಆಧಾರದ ಮೇಲೆ ಕೊಳತ್ತೂರು ಪೊಲೀಸರು ಆರೋಪಿ ಸುಬ್ರಮಣಿಯನ್ ನನ್ನು ಬಂಧಿಸಿದ್ದಾರೆ.
ಡಿಸೆಂಬರ್ 23ರಂದು ಈ ಘಟನೆ ನಡೆದಿದೆ. ಅಪ್ರಾಪ್ತ ಬಾಲಕಿ ತನ್ನ ತಂದೆಯೊಂದಿಗೆ ಶಬರಿಮಲೆಗೆ ಯಾತ್ರೆಗೆ ಹೋಗಿದ್ದಳು. ಬಾಲಕಿಯ ತಂದೆ ಶೌಚಾಲಯಕ್ಕೆ ಹೋಗುವಾಗ ತನ್ನ ಮಗಳನ್ನು ನೋಡಿಕೊಳ್ಳುವಂತೆ ತಂದೆ ಸುಬ್ರಮಣಿಯನ್ ಅವರನ್ನು ಕೇಳಿದ್ದರು. ಈ ವೇಳೆ ಈತ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದಾನೆ ಎನ್ನಲಾಗಿದೆ.
ಬಾಲಕಿ ಮನೆಗೆ ಮರಳಿದ ನಂತರ ಘಟನೆಯ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿದ್ದಾಳೆ. ಚೈಲ್ಡ್ ಲೈನ್ ನೀಡಿದ ಮಾಹಿತಿ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.