ಚಿಕ್ಕಬಳ್ಳಾಪುರ: ಬುದ್ಧಿವಾದ ಹೇಳಿದ್ದಕ್ಕೆ ವ್ಯಕ್ತಿಗೆ ವಿದ್ಯುತ್ ಹರಿಸಿ ಕೊಲೆಗೆ ಯತ್ನಿಸಿದ ಘಟನೆ ಗುಡಿಬಂಡೆ ತಾಲೂಕಿನ ನಿಲುಗಂಬ ಗ್ರಾಮದ ಸಮೀಪ ನಡೆದಿದೆ.
ಜಮೀನಿನ ಗೇಟ್ ಗೆ ವಿದ್ಯುತ್ ಹರಿಸಿ ನಿಲುಗಂಬ ಗ್ರಾಮದ ಪ್ರಸಾದ್ ರೆಡ್ಡಿ ಅವರನ್ನು ಕೊಲೆ ಮಾಡಲು ಯತ್ನಿಸಿದ್ದು, ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜನವರಿ 17ರಂದು ರಾತ್ರಿ ಜಮೀನಿನಿಂದ ಮನೆಗೆ ತೆರಳುವಾಗ ಕಾಂಪೌಂಡ್ ಗೇಟ್ ನ ತೆಗೆಯಲು ಹೋದಾಗ ಪ್ರಸಾದ್ ಅವರಿಗೆ ಕರೆಂಟ್ ಶಾಕ್ ಹೊಡೆದಿದೆ. ಸಮೀಪದ ಬಾಬುಲಾಲ್ ಜಮೀನಿನಲ್ಲಿರುವ ವಿದ್ಯುತ್ ಕಂಬದಿಂದ ಅಕ್ರಮವಾಗಿ ವಿದ್ಯುತ್ ತಂತಿ ಹಾಕಿ ಗೇಟಿಗೆ ಸಂಪರ್ಕ ಕೊಟ್ಟಿರುವುದು ಗೊತ್ತಾಗಿದೆ.
ನಿಲುಗಂಬ ಗ್ರಾಮದ ಶಿವಶಂಕರ ರೆಡ್ಡಿ ಮತ್ತು ಸತೀಶ್ ನನ್ನನ್ನು ಸಾಯಿಸಲು ಗೇಟ್ ಗೆ ವಿದ್ಯುತ್ ಹರಿಸಿದ್ದಾರೆ ಜಮೀನು ವಿಚಾರವಾಗಿ ಗಲಾಟೆ ಮಾಡಿಕೊಳ್ಳುತ್ತಿದ್ದ ಅವರಿಗೆ ಬುದ್ಧಿವಾದ ಹೇಳಿದ್ದಕ್ಕೆ ಈ ರೀತಿ ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ಪ್ರಸಾದ್ ದೂರು ನೀಡಿದ್ದಾರೆ. ಗುಡಿಬಂಡೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.