ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜಿಮ್ ಗೆ ನುಗ್ಗಿ ಕೊಲೆಗೆ ಯತ್ನ ನಡೆದಿದೆ. ಭದ್ರಾವತಿಯ ಬಿ.ಹೆಚ್. ರಸ್ತೆಯ ಸ್ಮಾರ್ಟ್ ಫಿಟ್ನೆಸ್ ಜಿಮ್‌ನಲ್ಲಿ ಕೃತ್ಯ ನಡೆದಿದೆ.
ಯುವಕ ಜೋಯೆಲ್ ಥಾಮ್ಸನ್ ಮೇಲೆ ಮಚ್ಚು ಲಾಂಗುಗಳಿಂದ ದಾಳಿ ನಡೆಸಲಾಗಿದೆ. ವಿಶ್ವ ಅಲಿಯಾಸ್ ಮುದ್ದೆ, ಕೋಟೇಶ ಅಲಿಯಾಸ್ ಕೋಟಿ, ನವೀನ ಅಲಿಯಾಸ್ ಡಿಂಗ ಸೇರಿ ಆರು ಜನರ ಗ್ಯಾಂಗ್ ನಿಂದ ದಾಳಿ ನಡೆದಿದೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಪೊಲೀಸರು ಬರುತ್ತಿದ್ದಂತೆ ಕ್ಷಣಾರ್ಧದಲ್ಲಿ ಆರೋಪಿಗಳು ಪರಾರಿಯಾಗಿದ್ದಾರೆ. ಗಾಯಾಳು ಜೋಯೆಲ್ ಥಾಮ್ಸನ್ ನನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಹಳೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.