ಕಲಬುರಗಿ : ಶನಿವಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ದ ಎಫ್ ಡಿಎ ಪರೀಕ್ಷೆಯಲ್ಲಿ ಅಕ್ರಮ ನಡೆಸಿರುವ ಆರೋಪದ ಹಿನ್ನೆಲೆಯಲ್ಲಿ ಪಿಎಸ್ ಐ ಅಕ್ರಮದ ಕಿಂಗ್ ಪಿನ್ ಆರ್. ಡಿ. ಪಾಟೀಲ್ ಸೇರಿ 9 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಕಲಬುರಗಿ ನಗರದ ಶರಣಬಸವೇಶ್ವರ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ನಡೆದ ಎಫ್ ಡಿಎ ಪರೀಕ್ಷೆಯಲ್ಲಿ ಅಭ್ಯರ್ಥಿಗಳಾದ ಬಾಬು ಚಾಂದ್ ಶೇಖ್, ಸಂತೋಷ ಯಾಳಗಿ, ಆಕಾಶ್ ಬ್ಲೂಟುತ್ ಡಿವೈಸ್ ಬಳಸಿ ನಕಲು ಮಾಡುತ್ತಿದ್ದರು. ಈ ವೇಳೆ ಪರೀಕ್ಷಾ ಕೊಠಡಿ ಮೇಲ್ವಿಚಾರಕ ಇವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಇವರಿಗೆ ಸಹಾಯ ಮಾಡಿದ್ದ ಹಾಗೂ ಬ್ಲೂಟುತ್ ಡಿವೈಸ್ ನೀಡಿದ್ದ ಆರ್.ಡಿ ಪಾಟೀಲ್ ಸೇರಿದಂತೆ ಐವರ ಮೇಲೆ ಕೇಸ್ ದಾಖಲಾಗಿತ್ತು.
ಕೆಇಎ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ ಅಕ್ರಮ ಮಾಡಿದ ಆರೋಪದ ಮೇಲೆ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಒಟ್ಟು 16 ಜನರನ್ನು ಪೊಲೀಸರು ಬಂಧಿಸಿದ್ದು, ಈ ಪಯಕಿ ಆರು ಮಂದಿ ಅಭ್ಯರ್ಥಿಗಳು ಮತ್ತು ಅವರಿಗೆ ಸಹಾಯ ಮಾಡುತ್ತಿದ್ದ 10 ಜನರು ಇದ್ದಾರೆ.
ಶನಿವಾರ ಕಲಬುರಗಿಯ ಶರಣಬಸವೇಶ್ವರ ಕಾಲೇಜಿನಲ್ಲಿ ಬ್ಲೂಟೂತ್ ಬಳಸಿ ಪರೀಕ್ಷೆ ಬರೆಯುತ್ತಿದ್ದ ಅಭ್ಯರ್ಥಿ ತ್ರಿಮೂರ್ತಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಗುಲ್ಬರ್ಗ ವಿವಿ ಕ್ಯಾಂಪಸ್ ನಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಯಾದಗಿರಿಯ ಪರೀಕ್ಷಾ ಕೇಂದ್ರವೊಂದರಲ್ಲಿ ಬ್ಲೂಟೂತ್ ಬಳಸಿ ಅಕ್ರಮ ಮಾಡುತ್ತಿದ್ದ ಅಭ್ಯರ್ಥಿಯನ್ನು ಹಾಗೂ ಸಹಾಯ ಮಾಡುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ.