ಈರೋಡ್: ಮನೆಗೆ ಬೆಂಕಿ ಹಚ್ಚಿ ಆತ್ಮಹತ್ಯೆಗೆ ಯತ್ನಿಸಿದ ಕರ್ನಾಟಕ ಐಪಿಎಸ್ ಅಧಿಕಾರಿ ಅರುಣ್ ರಂಗರಾಜನ್ ಅವರನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.
ಅರುಣ್ ರಂಗರಾಜನ್ ಲಿವ್ ಇನ್ ಸಂಗಾತಿಯ ಮೇಲೆ ದಾಳಿ ನಡೆಸಿ ಬಂಧನ ಭೀತಿಯಲ್ಲಿದ್ದರು. ಕರ್ನಾಟಕ ಐಪಿಎಸ್ ಅಧಿಕಾರಿ ಎಂ. ಅರುಣ್ ರಂಗರಾಜನ್(38) ತಮ್ಮ ಮನೆಗೆ ಬೆಂಕಿ ಹಚ್ಚಿಕೊಂಡು ಸಾಯಲು ಪ್ರಯತ್ನಿಸಿದ್ದಾರೆ. ಆದರೆ ಬೆಂಕಿ ಹೊತ್ತಿದ್ದ ಮನೆಗೆ ನುಗ್ಗಿದ ಪೊಲೀಸರು ಅರುಣ್ ಅವರನ್ನು ಬಂಧಿಸಿದ್ದಾರೆ.
ಫೆಬ್ರವರಿಯಲ್ಲಿ ತಮಿಳುನಾಡಿನ ದೇವಾಲಯವೊಂದರಲ್ಲಿ ಅರುಣ್ ತಮ್ಮ ಸಂಗಾತಿ ಮತ್ತು ಕರ್ನಾಟಕದಲ್ಲಿ ಎಸ್ಐ ಆಗಿದ್ದ ಸುಜಾತಾ ಅವರ ಮೇಲೆ ದಾಳಿ ನಡೆಸಿದ್ದಾಗ ಪೊಲೀಸರ ಮಧ್ಯಪ್ರವೇಶದಿಂದ ಸಮಸ್ಯೆ ಬಗೆಹರಿದು ಯಾವುದೇ ದೂರು ದಾಖಲಾಗಿರಲಿಲ್ಲ. ನಂತರ ಸುಜಾತಾ ಗೋಪಿಚೆಟ್ಟಿಪಾಳ್ಯಂನಲ್ಲಿರುವ ರಂಗರಾಜನ್ ಪೋಷಕರ ಮನೆಗೆ ಮರಳಿದ್ದರು. ಮತ್ತೊಮ್ಮೆ ಅವರ ಮೇಲೆ ಅರುಣ್ ರಂಗರಾಜನ್ ಅಂತಾಳಿ ನಡೆಸಿದ್ದು, ಫೆಬ್ರವರಿಯಲ್ಲಿ ಸುಜಾತಾ ಆಸ್ಪತ್ರೆಗೆ ದಾಖಲಾಗಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಸ್ಥಳೀಯ ಕೋರ್ಟ್ ಅವರಿಗೆ ಜಾಮೀನು ನೀಡಿತ್ತು. ಘಟನೆಯ ಕಾರಣ ಕರ್ನಾಟಕ ಸರ್ಕಾರ ಅವರನ್ನು ಅಮಾನತು ಮಾಡಿತ್ತು.
ಅಂದಿನಿಂದ ಸುಜಾತಾ ತಮ್ಮ ತಂದೆ ತಾಯಿ ಮನೆಯಲ್ಲಿದ್ದರು. ಭಾನುವಾರ ಅವರು ಅರುಣ್ ಮನೆಗೆ ಮರಳಿದಾಗ ಇಬ್ಬರ ನಡುವೆ ಜಗಳವಾಗಿದೆ. ಅರುಣ್ ರಾಡ್ ನಿಂದ ಹಲ್ಲೆಗೆ ಯತ್ನಿಸಿದ್ದಾರೆ. ಸುಜಾತಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಚೆಟ್ಟಿಪಾಳ್ಯ ಪೊಲೀಸ್ ಅಧಿಕಾರಿ ಕಾಮರಾಜ್ ತಿಳಿಸಿದ್ದಾರೆ.
ಕೂಡಲೇ ಪೊಲೀಸರು ಬಂಧನಕ್ಕೆ ಅವರ ಮನೆಗೆ ಆಗಮಿಸಿದಾಗ ಮನೆ ಒಳಗೆ ಹೋದ ಅರುಣ್ ಬೆಂಕಿ ಹಚ್ಚಿದ್ದಾರೆ. ಬೆಂಕಿಯನ್ನು ನಂದಿಸಿದ ಪೊಲೀಸರು ಅರುಣ್ ಅವರನ್ನು ಬಂಧಿಸಿದ್ದಾರೆ. ಅವರನ್ನು ಕೊಯಮತ್ತೂರಿನ ಸೆಂಟ್ರಲ್ ಜೈಲ್ ನಲ್ಲಿ ನ್ಯಾಯಾಂಗ ಬಂದನದಲ್ಲಿ ಇರಿಸಲಾಗಿದೆ.