ಬೆಂಗಳೂರು: ಬೆಂಗಳೂರಿನ ಮಹದೇವಪುರದ ಮಹೇಶ್ವರಿ ನಗರದಲ್ಲಿ ನಡೆದ ಯುವತಿ ಕೊಲೆ ಪ್ರಕರಣವನ್ನು ಘಟನೆ ನಡೆದ ಕೆಲವೇ ತಾಸಿನಲ್ಲಿ ಭೇದಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಯುವತಿಯನ್ನು ಮನೆಯೊಳಗೆ ಎಳೆದುಕೊಂಡು ಹೋದ ನೆರೆಮನೆ ವ್ಯಕ್ತಿ ಅತ್ಯಾಚಾರಕ್ಕೆ ಯತ್ನಿಸಿದ್ದು, ಆಕೆ ಜೋರಾಗಿ ಚೀರಾಡಿದ್ದರಿಂದ ಭಯಗೊಂಡು ಉಸಿರುಗಟ್ಟಿಸಿ ಕೊಲೆ ಮಾಡಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಒಡಿಶಾ ಮೂಲದ ಕೃಷ್ಣಚಂದ್ರ ಸೇತಿ(28) ಬಂಧಿತ ಆರೋಪಿ. ಗುರುವಾರ ರಾತ್ರಿ 21 ವರ್ಷದ ಯುವತಿನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದು, ವಿರೋಧ ವ್ಯಕ್ತಪಡಿಸಿದಾಗ ಕುತ್ತಿಗೆ ಬಿಗಿದು ಬಾಯಿ ಮುಚ್ಚಿ ಕೊಲೆ ಮಾಡಿದ್ದಾನೆ. ಬೆಳಗಿನ ಜಾವ ಮೃತ ದೇಹವನ್ನು ಮನೆಯ ಎದುರು ಎಸೆದಿದ್ದಾನೆ.
ಯುವತಿ ಚಪ್ಪಲಿಗಳು ಮನೆ ಬಳಿಯೇ ಇದ್ದವು. ಮೃತ ದೇಹದ ಪಾದಗಳಲ್ಲಿ ಯಾವುದೇ ಧೂಳು ಇರಲಿಲ್ಲ. ಹಂತಕರು ಸಮೀಪದಲ್ಲೇ ಇರಬಹುದು ಎಂದು ಶಂಕಿಸಿದ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ.
ಆರೋಪಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದು, ಆತನ ಪತ್ನಿ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಗುರುವಾರ ರಾತ್ರಿ 12 ಗಂಟೆವರೆಗೆ ಪತ್ನಿಗೆ ಕೆಲಸ ಇದ್ದ ಕಾರಣ ಒಬ್ಬನೇ ಇದ್ದ ಕೃಷ್ಣಚಂದ್ರ ನೆರೆಮನೆ ಯುವತಿ ಮನೆಯಿಂದ ಹೊರಗೆ ಬಂದಾಗ ಕೃತ್ಯ ಎಸಗಿದ್ದಾನೆ. ಮೃತದೇಹವನ್ನು ಬೆಡ್ ಶೀಟ್ ನಲ್ಲಿ ಸುತ್ತಿ ಡ್ರಮ್ ನೊಳಗೆ ಬಚ್ಚಿಟ್ಟಿದ್ದಾನೆ. ಬೆಳಗಿನ ಜಾವ ಶವ ಎಸೆದಿದ್ದಾನೆ. ಮನೆ ಮುಂದೆ ಶವ ಕಂಡು ಜನ ಸೇರಿದ್ದರೂ ಆರೋಪಿ ಮಾತ್ರ ಹೊರಗೆ ಬಂದಿರಲಿಲ್ಲ.
ಕಲಬುರಗಿ ಮೂಲದ ಯುವತಿ ತನ್ನ ಸಹೋದರಿಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದರು. ಗುರುವಾರ ರಾತ್ರಿ ಯುವತಿ ಏಕಾಏಕಿ ನಾಪತ್ತೆಯಾಗಿದ್ದು, ಎಲ್ಲೆಡೆ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ರಾತ್ರಿ 12 ಗಂಟೆಗೆ ಮಹದೇವಪುರ ಠಾಣೆಗೆ ನಾಪತ್ತೆ ದೂರು ನೀಡಲಾಗಿತ್ತು. ಬೆಳಗಿನ ಜಾವ ಯುವತಿಯ ಮೃತ ದೇಹ ಕಂಡುಬಂದಿತ್ತು.