ಬಳ್ಳಾರಿ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವೈ ರಮೇಶಬಾಬು ಅವರ ಮಾರ್ಗದರ್ಶನದಲ್ಲಿ ಬಳ್ಳಾರಿ ನಗರದ ಜಾಗೃತಿ ನಗರ, ಕವಾಡಿ ಸ್ಟ್ರೀಟ್, ರೇಷ್ಮೆ ಕಚೇರಿ ಹತ್ತಿರ ಯಾವುದೇ ಕ್ಲಿನಿಕ್ ಹೆಸರಿನ ಬೋರ್ಡ್ಗಳಿಲ್ಲದ 04 ನಕಲಿ ಕ್ಲಿನಿಕ್ಗಳ ಮೇಲೆ ದಾಳಿ ಮಾಡಿ, ಪರಿಶೀಲಿಸಲಾಗಿದ್ದು, ನಕಲಿ ವೈದ್ಯರಾದ ಕರೀಮ್, ಗೋವಿಂದ್, ಜಾವೀದ್, ಶಬಾನಾ ಅವರ ವಿರುದ್ಧ ಕೌಲ್ಬಜಾರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಮೋಹನ ಕುಮಾರಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು ಕರ್ನಾಟಕ ಖಾಸಗಿ ಆಸ್ಪತ್ರೆಗಳ ಅಧಿನಿಯಮ-2007ರ ಅಡಿಯಲ್ಲಿ ಆಸ್ಪತ್ರೆಗಳು ಮತ್ತು ಪ್ರಯೋಗಾಲಯಗಳು ಕಡ್ಡಾಯವಾಗಿ ನೊಂದಣಿ ಮಾಡಿಸಿ, ಅನುಮತಿ ಪಡೆದುಕೊಂಡು ಕಾರ್ಯ ನಿರ್ವಹಣೆ ಮಾಡಬೇಕು ಎಂದು ಹೇಳಿದ್ದಾರೆ.ಅನುಮತಿ ಪಡೆಯದೇ ಕಾರ್ಯ ಆರಂಭಿಸಿದ್ದರೆ ತಕ್ಷಣ ಸ್ಥಗಿತಗೊಳಿಸಿ ಅನುಮತಿ ಪಡೆಯಬೇಕು. ಮುಖ್ಯವಾಗಿ ವೈದ್ಯರು ಅಲ್ಲದವರು ವೈದ್ಯ ವೃತ್ತಿ ಮಾಡುತ್ತಿದ್ದಲ್ಲಿ ಕಾನೂನು ರೀತಿಯಲ್ಲಿ ಎಫ್ಐಅರ್ ದಾಖಲಿಸಲಾಗುವುದು. ವೈದ್ಯ ವೃತ್ತಿ ಮಾಡುವವರಿಗೆ ಬಾಡಿಗೆ ಕೊಡುವಾಗ ಅಂಗಡಿಗಳ ಮಾಲೀಕರು ಸಹ ಅವರ ಮಾಹಿತಿ ಪಡೆದು ಬಾಡಿಗೆ ನೀಡಬೇಕು. ಇಲ್ಲದಿದ್ದರೆ, ಮಾಲಿಕರ ಲೋಪವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ವೈದ್ಯ ಪದವಿ ಪಡೆಯದವರು ಗೊತ್ತಿಲ್ಲದ ಔಷಧಿಗಳನ್ನು ಜನತೆಗೆ ನೀಡುವುದರಿಂದ ವ್ಯಕ್ತಿಯ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವುದು, ಅದರಲ್ಲೂ ಜೀವದ ಪ್ರಶ್ನೆ ಇರುವ ಆರೋಗ್ಯ ಸೇವೆಗಳನ್ನು ನೀಡುವಾಗ ಅಧಿಕೃತವಾಗಿ ನೋಂದಣೆ ಮಾಡಿಸಬೇಕು.ನೊಂದಣಿ ಮಾಡಿಸದೇ ವೈದ್ಯ ವೃತ್ತಿ ಮಾಡುತ್ತಿದ್ದಲ್ಲಿ ಅಂತವರ ವಿರುದ್ದ ಕರ್ನಾಟಕ ಖಾಸಗಿ ಆಸ್ಪತ್ರೆಗಳ ಅಧಿನಿಯಮ-2007 ಅಡಿಯಲ್ಲಿ ಕಾನೂನಾತ್ಮಕ ಕ್ರಮಗಳನ್ನು ಜರುಗಿಸಲಾಗುವುದು ಎಂದು ತಿಳಿಸಿದರು.
ಈ ದಾಳಿ ಸಂದರ್ಭದಲ್ಲಿ ಕೆಪಿಎಂಎ ತಂಡದ ಅರುಣ್ ಕುಮಾರ್ ಮತ್ತು ಗೋಪಾಲ್.ಹೆಚ್.ಕೆ., ಕೌಲ್ಬಜಾರ್ ಪೊಲೀಸ್ ಠಾಣೆಯ ಸಿಬ್ಬಂದಿಯವರು ಇದ್ದರು.