ಬೆಂಗಳೂರು: ಬೀದರ್, ಮಂಗಳೂರಿನಲ್ಲಿ ದರೋಡೆಕೋರರ ಅಟ್ಟಹಾಸ ಹಿನ್ನಲೆಯಲ್ಲಿ ತಡರಾತ್ರಿ ಬೆಂಗಳೂರು ನಗರದಲ್ಲಿ ಪೊಲೀಸ್ ಅಧಿಕಾರಿಗಳು ರೌಂಡ್ಸ್ ನಡೆಸಿದ್ದಾರೆ.
ನಗರದ ಹೆಚ್ಚುವರಿ ಪೊಲೀಸ್ ಆಯುಕ್ತರು, ಸಿಸಿಬಿ ಡಿಸಿಪಿಗಳು ಬೆಂಗಳೂರು ನಗರದ ಎಲ್ಲಾ ವಿಭಾಗದ ಡಿಸಿಪಿಗಳು ರೌಂಡ್ಸ್ ಹಾಕಿದ್ದಾರೆ. ಒಂದೊಂದು ಪೊಲೀಸ್ ಠಾಣಾ ವ್ಯಾಪ್ತಿಗೆ ಓರ್ವ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸದಾಶಿವನಗರದ ವ್ಯಾಪ್ತಿಯಲ್ಲಿ ಪೊಲೀಸ್ ಆಯುಕ್ತ ದಯಾನಂದ್ ಅವರು ರೌಂಡ್ಸ್ ನಡೆಸಿದ್ದಾರೆ. ಬೆಂಗಾವಲು ಪಡೆಯ ವ್ಯಾನ್ ಚಾಲನೆ ಮಾಡಿಕೊಂಡು ಕಮಿಷನರ್ ಆಗಮಿಸಿದ್ದರು. ಡಿಸಿಪಿಗಳು ಎಲ್ಲೆಲ್ಲಿ ರೌಂಡ್ಸ್ ನಲ್ಲಿ ಇದ್ದಾರೆ ಎಂದು ಮಾಹಿತಿ ಪಡೆದುಕೊಂಡಿದ್ದಾರೆ.
ಬೀದರ್ ನಲ್ಲಿ ಎಟಿಎಂ ಹಣ ದರೋಡೆ, ಮಂಗಳೂರಿನಲ್ಲಿ ಬ್ಯಾಂಕ್ ದರೋಡೆ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಜನರ ಭಯ ಹೋಗಲಾಡಿಸಿ ಸುರಕ್ಷತೆ ಸಂದೇಶ ಸಾರುವ ನಿಟ್ಟಿನಲ್ಲಿ ಎಲ್ಲಾ ಹಿರಿಯ ಅಧಿಕಾರಿಗಳು ವಿಶೇಷ ಗಸ್ತು ನಡೆಸಿದ್ದಾರೆ. ಕೋರಮಂಗಲ ವ್ಯಾಪ್ತಿಯಲ್ಲಿ ರಾಣಿ ಚೆನ್ನಮ್ಮ ಮಹಿಳಾ ಪಡೆ ರೌಂಡ್ಸ್ ನಡೆಸಿದೆ.