ಮೊದಲ ಲುಕ್ ಹೊರಬಂದಾಗಿನಿಂದಲೂ ದೇಶದಲ್ಲಿ ಭಾರೀ ಸದ್ದು ಮಾಡುತ್ತಿರುವ ಓಲಾ ಎಸ್1 ಎಲೆಕ್ಟ್ರಿಕ್ ಸ್ಕೂಟರ್‌ನ ಘಟಕಗಳಿಗೆ ಮಾಡಿರುವ ಬುಕಿಂಗ್‌ಗಳು ಹಾಗೂ ಪೂರೈಕೆ ಮಾಡಲಾಗಿರುವ ಸಂಖ್ಯೆಗಳಲ್ಲಿ ಇರುವ ದೊಡ್ಡ ವ್ಯತ್ಯಾಸದಿಂದ ಓಲಾ ಸ್ವಲ್ಪ ನಕಾರಾತ್ಮವಾಗಿಯೇ ಸುದ್ದಿಯಲ್ಲಿದೆ.
ಇದೀಗ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳ ವಿಚಾರದಲ್ಲಿ ಮತ್ತೊಂದು ವಿಚಾರ ಗೊಂದಲದಲ್ಲಿದೆ. ಓಲಾದ ಬ್ಯಾಟರಿ ಒಂದು ಪೂರ್ಣ ಚಾರ್ಜ್‌ನಲ್ಲಿ ಎಷ್ಟು ದೂರ ಚಲಿಸಲಿದೆ ಎಂಬ ವಿಚಾರ ಗೊಂದಲಕ್ಕೆ ಸಿಲುಕಿದೆ.
ಓಲಾ ತಿಳಿಸಿದಂತೆ ಎಸ್1ನ ಎಆರ್‌ಎಐ-ಪ್ರಮಾಣೀಕೃತ ಚಾಲನಾ ವ್ಯಾಪ್ತಿ ಮತ್ತು ವಾಸ್ತವದ ಚಾಲನಾ ವ್ಯಾಪ್ತಿಯಲ್ಲಿ ಭಾರೀ ವ್ಯತ್ಯಾಸಗಳು ಬಂದಿವೆ ಎಂದು ಹೇಳಲಾಗುತ್ತಿದೆ.
ಒಂದು ಪೂರ್ಣ ಚಾರ್ಜ್‌ನಲ್ಲಿ ಎಸ್1ನ ಬ್ಯಾಟರಿ 181 ಕಿಮೀ ಮೈಲೇಜ್ ಕೊಡುತ್ತದೆ ಎಂದು ಓಲಾ ತಿಳಿಸಿದ್ದರೂ ಸಹ ವಾಸ್ತವದಲ್ಲಿ 130ಕಿಮೀಗಳಷ್ಟು ಮಾತ್ರವೇ ಪೂರ್ಣವಾಗಿ ಚಾರ್ಜ್ ಆದ ಬ್ಯಾಟರಿ ಕೊಡಬಲ್ಲದು ಎಂದು ತಿಳಿದು ಬಂದಿದೆ.
ವಾಸ್ತವಿಕ ಪರಿಸ್ಥಿತಿಗಳಲ್ಲಿ ಇವಿ ಬ್ಯಾಟರಿಗಳ ನಿಜವಾದ ರೇಂಜ್ ಎಷ್ಟೆಂದು ತಿಳಿಯಪಡಿಸವ ಅಥರ್ ಎನರ್ಜಿ ಪ್ರಕಾರ ಓಲಾದ 181ಕಿಮೀ ವ್ಯಾಪ್ತಿಯ ಮಾತು ತಪ್ಪಾಗಿದೆ.
“ಅಥರ್ 450ಎಕ್ಸ್‌ನ ಪ್ರಮಾಣೀಕೃತ ವ್ಯಾಪ್ತಿಯು 116 ಕಿಮೀ ಇದೆ. ಸರಳವಾಗಿ ಹೇಳಬೇಕೆಂದರೆ, ನಿಜವಾದ ಪರಿಸ್ಥಿತಿಗಳಲ್ಲಿ ಸ್ಕೂಟರ್ ಇಷ್ಟು ಮೈಲೇಜ್ ಕೊಡಲು ಶಕ್ತವಾಗಿರುತ್ತದೆ. ನೀವು ರಸ್ತೆ ಮೇಲೆ ಬಂದಾಗ ಆಗುವ ಲೆಕ್ಕಾಚಾರ ನಮ್ಮದು. ಏಕೆಂದರೆ, ವಾಸ್ತವದಲ್ಲಿ, ಪದೇ ಪದೇ ಬ್ರೇಕ್ ಹಾಕುವುದು, ಹಿಂಬದಿ ಸವಾರರು — ಚಾಲನಾ ವ್ಯಾಪ್ತಿ ಮೇಲೆ ಪರಿಣಾಮ ಬೀರುವ ಪ್ರತಿಯೊಂದನ್ನು ಗಣನೆಗೆ ತೆಗೆದುಕೊಳ್ಳಬೇಕು. ಮತ್ತು ನಾವು ಅದನ್ನೇ ನಿಜವಾದ ರೇಂಜ್ ಎನ್ನುವುದು,” ಎನ್ನುವ ಮಾತನ್ನು ಅಥರ್ ಎನರ್ಜಿಯ ತರುಣ್ ಮೆಹ್ತಾ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಓಲಾ ಎಲೆಕ್ಟ್ರಿಕ್‌ನ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ವರುಣ್ ದುಬೇ, “ಓಲಾ ನೀಡಿರುವ 181-135 ವ್ಯಾಪ್ತಿಯ ಎಂಬ ಮಾಹಿತಿಯಲ್ಲಿ 25%ನಷ್ಟು ವ್ಯತ್ಯಯ ಕಂಡುಬರುತ್ತದೆ. ಉದ್ಯಮದಲ್ಲಿ ನಮ್ಮದೇ ಅತ್ಯಂತ ಕಡಿಮೆ ವ್ಯತ್ಯಾಸ. ಈ ವ್ಯತ್ಯಾಸ ಬಹಳ ಸಹಜ. ಎಆರ್‌ಎಐ ಪ್ರಮಾಣೀಕರಣ ಒಂದು ಕಾನೂನು; ನಾವು ಹೇಳಿಕೊಳ್ಳಬೇಕಾಗಿರುವುದು ಇದನ್ನೇ ಮತ್ತು ವಾಸ್ತವದ ಜಗತ್ತಿನಲ್ಲಿ ನಾವು 135 ಕಿಮೀನಲ್ಲಿದ್ದೇವೆ. ಬೇರೆ ಕಂಪನಿಗಳಲ್ಲಿ 30-40% ವ್ಯಾಪ್ತಿಯಲ್ಲಿ ವ್ಯತ್ಯಾಸಗಳು ಇದ್ದು ನಮ್ಮಲ್ಲಿ ಬರೀ 25% ಇದೆ,” ಎಂದಿದ್ದಾರೆ.