ಪಳೆಯುಳಿಕೆ ಇಂಧನಗಳ ಬೆಲೆಗಳು ದಿನೇ ದಿನೇ ಏರಿಕೆಯಾಗುತ್ತಿರುವ ನಡುವೆ ಎಲೆಕ್ಟ್ರಿಕ್ ವಾಹನಗಳಿಗೆ ದಿನೇ ದಿನೇ ಬೇಡಿಕೆ ಏರುತ್ತಿದೆ. ಇದರೊಂದಿಗೆ ಇವಿಗಳ ಖರೀದಿಗೆ ಭಾರತೀಯ ಸರ್ಕಾರ ನೀಡುವ ಫೇಮ್-2 ಸಬ್ಸಿಡಿ ಇವಿ ಖರೀದಿಯ ಹಣಕಾಸಿನ ಹೊರೆಯನ್ನು ಇನ್ನಷ್ಟು ತಗ್ಗಿಸಿದೆ.
ಆದರೆ ಫೇಮ್-2 ಜೂನ್ 1ಕ್ಕೆ ಅಂತ್ಯಗೊಳ್ಳುವ ಕಾರಣದಿಂದ ಇವಿಗಳ ಬೆಲೆಗಳಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ. ಸದ್ಯದ ಮಟ್ಟಿಗೆ ಎಕ್ಸ್-ಶೋರೂಂ ಬೆಲೆಯ 40% ಗರಿಷ್ಠ ಮಿತಿಯಂತೆ, ಬ್ಯಾಟರಿ ಪ್ಯಾಕ್‌ನ ಪ್ರತಿ ಒಂದು ಕಿವ್ಯಾ ಸಾಮರ್ಥ್ಯಕ್ಕೆ 15,000 ರೂ.ನಂತೆ ಫೇಮ್-2 ಅಡಿ ಸಬ್ಸಿಡಿ ನೀಡಲಾಗುತ್ತಿದೆ. ಆದರೆ ಜೂನ್ 1ರಿಂದ ಈ ಸಬ್ಸಿಡಿಗಳು 10,000 ರೂ./ಕಿವ್ಯಾನಷ್ಟಕ್ಕೆ ಇಳಿಯುವ ಸಾಧ್ಯತೆ ಇದೆ.
ಹೀಗಾಗಿ, ಫೇಮ್-2 ಸಬ್ಸಿಡಿಗಳು ತಗ್ಗುವ ಮುನ್ನ ನಿಮ್ಮ ಹತ್ತಿರದಲ್ಲಿರುವ ಅಥೆರ್ ಶೋರೂಂಗೆ ಭೇಟಿ ಕೊಟ್ಟು, ಅಥೆರ್ 450ಎಕ್ಸ್ ಅನ್ನು ನಿಮ್ಮದಾಗಿಸಿಕೊಳ್ಳಿ ಎಂದು ಅಥೆರ್ ಎನರ್ಜಿಯ ಟ್ವಿಟರ್ ಹ್ಯಾಂಡಲ್‌ನಲ್ಲಿ ತಿಳಿಸಲಾಗಿದೆ. 31ನೇ ಮೇ ಒಳಗೆ ಇವಿ ಖರೀದಿ ಮಾಡುವ ಮೂಲಕ 32,500 ರೂ.ಗಳವರೆಗೂ ಉಳಿತಾಯ ಮಾಡಿ ಎಂದು ಅಥೆರ್ ಈ ಟ್ವೀಟ್ ಮೂಲಕ ಕೇಳಿಕೊಂಡಿದೆ.
ಮೇ 31ರೊಳಗೆ ಅಥೆರ್ 450 ಎಕ್ಸ್ ಬುಕ್ ಮಾಡುವ ಗ್ರಾಹಕರಿಗೆ ಪ್ರಸಕ್ತ ಸಬ್ಸಿಡಿ ದರದಲ್ಲಿ ಇವಿ ಸಿಗಲಿದೆ ಎಂದು ಕಂಪನಿ ತಿಳಿಸಿದೆ.