ಹೈದರಾಬಾದ್: ಭಗವಾನ್ ಅಯ್ಯಪ್ಪ ಸ್ವಾಮಿ, ಭಕ್ತರ ಬಗ್ಗೆ ಅವಮಾನಕರ ಹೇಳಿಕೆ ನೀಡಿ ವಿವಾದಕ್ಕೆ ಕಾರಣರಾದ ನಂತರ ನಾಸ್ತಿಕ ಸಂಘದ ಅಧ್ಯಕ್ಷ ಬೈರಿ ನರೇಶ್ ಅವರನ್ನು ವಾರಂಗಲ್ ನಲ್ಲಿ ಬಂಧಿಸಲಾಗಿದೆ.
ಅಯ್ಯಪ್ಪ ಸ್ವಾಮಿ ಭಕ್ತರ ವಿರುದ್ಧ ಬೈರಿ ನರೇಶ್ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ವಿಕಾರಾಬಾದ್ ಪೊಲೀಸ್ ವರಿಷ್ಠಾಧಿಕಾರಿ(ಎಸ್‌ಪಿ) ಕೋಟಿ ರೆಡ್ಡಿ ತಿಳಿಸಿದ್ದಾರೆ. ನಿನ್ನೆ ನಾವು ಪ್ರಕರಣ ದಾಖಲಿಸಿದ್ದೇವೆ. ಇಂದು ಅವರನ್ನು ವಾರಂಗಲ್‌ನಲ್ಲಿ ಬಂಧಿಸಲಾಗಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ತಿಳಿಸಿದ್ದಾರೆ.
ಬೈರಿ ನರೇಶ್ ವಿರುದ್ಧ ಐಪಿಸಿ ಸೆಕ್ಷನ್ 153(ಎ), 205, 505 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಯ್ಯಪ್ಪ ಸ್ವಾಮಿಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿರುವ ನಾಸ್ತಿಕ ಸಂಘದ ಅಧ್ಯಕ್ಷ ಬೈರಿ ನರೇಶ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಅಯ್ಯಪ್ಪ ಸ್ವಾಮಿ ಭಕ್ತರು ಶುಕ್ರವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದರು.
ಸಾರ್ವಜನಿಕ ಸಭೆಯೊಂದರಲ್ಲಿ ಬೈರಿ ನರೇಶ್ ಅಯ್ಯಪ್ಪ ದೇವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಬೈರಿ ನರೇಶ್ ಅವರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಹೈದರಾಬಾದ್‌ನ ವಿವಿಧ ಪೊಲೀಸ್ ಠಾಣೆಗಳಲ್ಲಿ ಭಕ್ತರು ದೂರು ದಾಖಲಿಸಿದ್ದರು.
ವಿಶ್ವ ಹಿಂದೂ ಪರಿಷತ್ ಸದಸ್ಯರು ಹಿಂದೂ ದೇವರನ್ನು ಅವಮಾನಿಸಿದ್ದಾರೆ. ಅಯ್ಯಪ್ಪ ಸ್ವಾಮಿಯ ಭಕ್ತರ ಭಾವನೆಗಳನ್ನು ಘಾಸಿಗೊಳಿಸಿದ್ದಾರೆಂದು ಆರೋಪಿಸಿ ಅವರ ವಿರುದ್ಧ ಮೊಕದ್ದಮೆ ಹೂಡುವಂತೆ ಕರೆ ನೀಡಿದ್ದರು. ಗುರುಸ್ವಾಮಿ ವೀರೇಂದ್ರ ಯಾದವ್ ಅವರು ಅಯ್ಯಪ್ಪ ಮತ್ತು ಇತರ ಹಿಂದೂ ದೇವರನ್ನು ಅವಮಾನಿಸಿದ ಬೈರಿ ನರೇಶ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಮಾದನ್ನಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.