ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತವೆ ಎಂಬ ಮಾತಿದೆ. ಬಿಹಾರದ ಛಪ್ರಾದಲ್ಲಿ ಈ ಮಾತು ಮತ್ತೊಮ್ಮೆ ಸಾಬೀತಾಗಿದೆ. ಮೂರೂವರೆ ಅಡಿ ಉದ್ದವಿರುವ ರೇಣು ಹೆಸರಿನ ಮೂರು ಅಡಿ ಉದ್ದದ ಶ್ಯಾಮ್ ಜೊತೆಗೆ ವಿವಾಹವಾಗಿದ್ದು, ನೆಟ್ಟಿಗರ ಗಮನ ಸೆಳೆದಿದ್ದಾರೆ.
ಮದುವೆಗೆ ಆಗಮಿಸಿದ್ದ ಅತಿಥಿಗಳು ಈ ವಿಶೇಷ ಜೋಡಿಯ ಫೋಟೋಗಳು ಹಾಗೂ ವಿಡಿಯೋಗಳನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ, ವಧೂ-ವರರ ವೈವಾಹಿಕ ಜೀವನಕ್ಕೆ ಶುಭ ಹಾರೈಸಿದ್ದಾರೆ.
ರೇಣು ಮತ್ತು ಶ್ಯಾಮ್ ಬೇರೆ ಜಾತಿಗಳಿಗೆ ಸೇರಿದವಾಗಿದ್ದರು, ಇಬ್ಬರ ಮದುವೆಗೆ ಪರಸ್ಪರರ ಕುಟುಂಬಗಳು ಹಸಿರು ನಿಶಾನೆ ತೋರಿವೆ. ವಧೂ ವರರ ಕುಟುಂಬಸ್ಥರು ತಮ್ಮ ಮಕ್ಕಳಿಗೆ ಸೂಕ್ತ ಜೋಡಿಯನ್ನು ಹುಡುಕುಲು ಸಾಧ್ಯವಾಗದೇ ಬಹಳ ದಿನ ಪರದಾಡಿದ್ದರು. ಇಲ್ಲಿನ ಛಪ್ರಾ ಸದರ್ ಬ್ಲಾಕ್‌ನ ಶ್ಯಾಮ್ ಕುಮಾರ್, ಏಳು ಜನ ಒಡಹುಟ್ಟಿದವರ ಪೈಕಿ ಅತ್ಯಂತ ಕುಳ್ಳಗಿದ್ದು, ತನ್ನ ಎತ್ತರ ಕಾರಣದಿಂದ ಮದುವೆಯಾಗಲು ಸಾಧ್ಯವಾಗಿರಲಿಲ್ಲ.
ಇದೇ ವೇಳೆ, ಬಹವಾಲ್ಪುರ ಪ್ರದೇಶದ ರೇಣು ತನ್ನ ತಂದೆ ತಾಯಿಯ ಕಿರಿಯ ಪುತ್ರಿಯಾಗಿದ್ದು, ಆಕೆಗೂ ಸಹ ತನ್ನ ಎತ್ತರದ ಕಾರಣದಿಂದ ಸೂಕ್ತ ವರನನ್ನು ಹುಡುಕುವುದು ಸಾಧ್ಯವಾಗಿರಲಿಲ್ಲ. ತನ್ನ ಒಡಹುಟ್ಟಿವರ ಪೈಕಿ ರೇಣು ಮಾತ್ರ ಹೀಗೆ ಕುಳ್ಳಗಿದ್ದ ಕಾರಣ ಆಕೆಯ ಕುಟುಂಬದವರಿಗೂ ಈ ವಿಚಾರ ಬೇಸರ ಮೂಡಿಸಿತ್ತು.
ಕೊನೆಗೆ ಋಣಾನುಬಂಧ ಈ ಇಬ್ಬರನ್ನೂ ಒಂದುಗೂಡಿಸಿದ್ದು, ದೇವಸ್ಥಾನವೊಂದರ ಆವರಣದಲ್ಲಿ ಇಬ್ಬರೂ ಮದುವೆಯಾಗಿದ್ದಾರೆ. ಈ ಮದುವೆಗೆ ನೂರಾರು ಅತಿಥಿಗಳು ಸಾಕ್ಷಿಯಾಗಿದ್ದಾರೆ.