ದೆಹಲಿ ರೈಲ್ವೆ ನಿಲ್ದಾಣದಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಮಂಗಳವಾರ ಬೆಳಗ್ಗೆ, ಚಲಿಸುತ್ತಿದ್ದ ರೈಲಿಗೆ ಹತ್ತಲು ಪ್ರಯತ್ನಿಸಿದ 62 ವರ್ಷದ ವ್ಯಕ್ತಿಯೊಬ್ಬರು ದುರ್ಮರಣಕ್ಕೀಡಾಗಿದ್ದಾರೆ. ಈ ಘಟನೆ ಪ್ಲಾಟ್‌ಫಾರ್ಮ್ 14ರಲ್ಲಿ ನಡೆದಿದೆ, ಮೂರು ವಾರಗಳ ಹಿಂದಷ್ಟೇ ಕಾಲ್ತುಳಿತದಲ್ಲಿ 18 ಮಂದಿ ಸಾವನ್ನಪ್ಪಿದ್ದರು.
ರೈಲ್ವೆ ಅಧಿಕಾರಿಗಳ ಪ್ರಕಾರ, ಮೃತ ವ್ಯಕ್ತಿಯನ್ನು ಹರಿಯಾಣದ ಪಾಣಿಪತ್‌ನ ತೆಹ್ಸಿಲ್ ಕ್ಯಾಂಪ್ ನಿವಾಸಿ ತಿಲಕ್ ರಾಜ್ ಎಂದು ಗುರುತಿಸಲಾಗಿದೆ. ಈ ದುರ್ಘಟನೆ ಶಾನ್-ಎ-ಪಂಜಾಬ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 12497) ರೈಲಿಗೆ ಹತ್ತಲು ಪ್ರಯತ್ನಿಸುವಾಗ ಸಂಭವಿಸಿದೆ. ಈ ರೈಲು ನವದೆಹಲಿಯಿಂದ ಅಮೃತಸರಕ್ಕೆ ಸಂಚರಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೈಲು ಬೆಳಗ್ಗೆ 6.40ಕ್ಕೆ ನವದೆಹಲಿಯಿಂದ ಹೊರಟಿದ್ದು, ಪ್ಲಾಟ್‌ಫಾರ್ಮ್ ಪ್ರದೇಶದಿಂದ ಬಹುತೇಕ ಹೊರಟು ಹೋಗಿತ್ತು. ಆಗ ಈ ದುರ್ಘಟನೆ ಸಂಭವಿಸಿದೆ.
ಸ್ಥಳಕ್ಕೆ ತಲುಪಿದ ಪೊಲೀಸರು, ವ್ಯಕ್ತಿಯ ಎರಡೂ ಕಾಲುಗಳು ಕತ್ತರಿಸಲ್ಪಟ್ಟು ಹಳಿಗಳ ನಡುವೆ ಬಿದ್ದಿದ್ದು, ಉಳಿದ ದೇಹವು ರೈಲು ಹಳಿಯ ಹೊರಗೆ ಬಿದ್ದಿರುವುದನ್ನು ಗಮನಿಸಿದರು. ಮೃತರ ಜೇಬಿನಿಂದ ಮೊಬೈಲ್ ಫೋನ್ ಪಡೆದುಕೊಳ್ಳಲಾಗಿದೆ. ಸ್ವಲ್ಪ ಸಮಯದ ನಂತರ, ಫೋನ್‌ಗೆ ಕರೆ ಬಂದಿದ್ದು, ಅದರ ಮೂಲಕ ಮೃತರ ಗುರುತು ಪತ್ತೆಯಾಗಿದೆ. ಅವರ ಪುತ್ರ ತರುಣ್ ಮತ್ತು ಸಂಬಂಧಿಕರು ಪೊಲೀಸ್ ಠಾಣೆಗೆ ಆಗಮಿಸಿದ್ದು, ಬಿಎನ್‌ಎಸ್‌ಎಸ್ ಸೆಕ್ಷನ್ 174ರ ಅಡಿಯಲ್ಲಿ ವಿಚಾರಣಾ ಪ್ರಕ್ರಿಯೆಗಳನ್ನು ನಡೆಸಲಾಗಿದೆ ಎಂದು ಡಿಸಿಪಿ ರೈಲ್ವೇಸ್ ಕೆ.ಪಿ.ಎಸ್ ಮಲ್ಹೋತ್ರಾ ತಿಳಿಸಿದ್ದಾರೆ. ಕುಟುಂಬದ ಹೇಳಿಕೆಗಳನ್ನು ದಾಖಲಿಸಿದ ನಂತರ, ಲೇಡಿ ಹಾರ್ಡಿಂಗ್ ವೈದ್ಯಕೀಯ ಕಾಲೇಜಿನಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ನಂತರ ಮೃತರ ದೇಹವನ್ನು ಅವರ ಮಗನಿಗೆ ಹಸ್ತಾಂತರಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.