ಶುಕ್ರವಾರ ರಾತ್ರಿ ಪೂರ್ವ ಜೆರುಸಲೆಮ್ ಸಿನಗಾಗ್‌ನ ಹೊರಗೆ ಪ್ಯಾಲೇಸ್ಟಿನಿಯನ್ ಬಂದೂಕುಧಾರಿ ಗುಂಡು ದಾಳಿ ನಡೆಸಿದ್ದು, 70 ವರ್ಷದ ಮಹಿಳೆ ಸೇರಿದಂತೆ 7 ಜನ ಮೃತಪಟ್ಟಿದ್ದಾರೆ.
ಪೊಲೀಸರು ಫೈರಿಂಗ್ ಮಾಡಿ ಬಂದೂಕುಧಾರಿ ಉಸಿರು ನಿಲ್ಲಿಸಿದ್ದಾರೆ. ಘಟನೆಯಲ್ಲಿ 10 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಇದು ಇತ್ತೀಚಿನ ವರ್ಷಗಳಲ್ಲಿ ಇಸ್ರೇಲಿಗಳ ಮೇಲೆ ನಡೆದ ದೊಡ್ಡ ಮಾರಣಾಂತಿಕ, ರಕ್ತಪಾತದ ದಾಳಿ ಇದಾಗಿದೆ ಎಂದು ಹೇಳಲಾಗಿದೆ.
ಇಸ್ರೇಲಿ ಮಿಲಿಟರಿ ಪಶ್ಚಿಮ ದಂಡೆಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 9 ಜನರನ್ನು ಕೊಂದ ಒಂದು ದಿನದ ನಂತರ ಈ ಘಟನೆ ಸಂಭವಿಸಿದೆ. ಗಾಜಾದಿಂದ ರಾಕೆಟ್ ದಾಳಿ ಮತ್ತು ಪ್ರತೀಕಾರದ ಇಸ್ರೇಲಿ ವೈಮಾನಿಕ ದಾಳಿಯನ್ನು ಒಳಗೊಂಡಿರುವ ಹಿಂಸಾಚಾರ ಇಸ್ರೇಲ್ ಹೊಸ ಸರ್ಕಾರಕ್ಕೆ ಆರಂಭಿಕ ಸವಾಲನ್ನು ಒಡ್ಡಿದೆ. ಯುಎಸ್ ಸ್ಟೇಟ್ ಸೆಕ್ರೆಟರಿ ಆಂಟೋನಿ ಬ್ಲಿಂಕೆನ್ ಅವರ ಭೇಟಿಯ ಮೇಲೂ ಮೋಡ ಕವಿದಿದೆ.
ಇಸ್ರೇಲ್‌ನ ರಾಷ್ಟ್ರೀಯ ಪೊಲೀಸ್ ಪ್ರಧಾನ ಕಛೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಭದ್ರತಾ ಮೌಲ್ಯಮಾಪನ ನಡೆಸಿ ತಕ್ಷಣದ ಕ್ರಮಕ್ಕೆ ಸೂಚಿಸಿದ್ದಾರೆ.
ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್-ಪಿಯರ್, ದಾಳಿಯನ್ನು ಬಲವಾಗಿ ಖಂಡಿಸಿ ಜೀವ ಹಾನಿ ಆಘಾತ ಮತ್ತು ದುಃಖ ತಂದಿದೆ. ಇಸ್ರೇಲ್ ಜನರಿಗೆ ಯುಎಸ್ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಹೇಳಿದ್ದಾರೆ.