ಉತ್ತರಾಖಂಡದ ಉತ್ತರಕಾಶಿಯಲ್ಲಿ ಗಂಗೋತ್ರಿಯಿಂದ 35 ವ್ಯಕ್ತಿಗಳನ್ನು ಸಾಗಿಸುತ್ತಿದ್ದ ಬಸ್ ಭಾನುವಾರ ಕಮರಿಗೆ ಬಿದ್ದು ಅಪಘಾತ ಸಂಭವಿಸಿದೆ. ಉತ್ತರಕಾಶಿಯ ಮುಖ್ಯ ಅಭಿವೃದ್ಧಿ ಅಧಿಕಾರಿ ಗೌರವ್ ಕುಮಾರ್ ಅವರ ಪ್ರಕಾರ, ಘಟನೆಯಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆ ಮತ್ತು 27 ಗಾಯಗೊಂಡ ವ್ಯಕ್ತಿಗಳನ್ನು ರಕ್ಷಿಸಲಾಗಿದೆ. ಘಟನೆಯಿಂದ ಹಾನಿಗೊಳಗಾದವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ.
ಬಸ್ ಗಂಗೋತ್ರಿಯಿಂದ ಉತ್ತರಕಾಶಿಗೆ ತೆರಳುತ್ತಿದ್ದಾಗ ಸಂಜೆ 4 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ.
ಉತ್ತರಕಾಶಿ ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ(ಡಿಡಿಎಂಒ) ದೇವೇಂದ್ರ ಪಟ್ವಾಲ್, ಗಂಗೋತ್ರಿ ರಾಷ್ಟ್ರೀಯ ಹೆದ್ದಾರಿಯ ಗಂಗಣಿ ಬಳಿ 35 ಜನರನ್ನು ಹೊತ್ತೊಯ್ಯುತ್ತಿದ್ದ ಬಸ್ ಕಮರಿಗೆ ಬಿದ್ದ ಪರಿಣಾಮ 7 ಜನ ಸಾವನ್ನಪ್ಪಿದ್ದಾರೆ ಮತ್ತು 27 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ರಕ್ಷಣಾ ಕಾರ್ಯಾಚರಣೆಯನ್ನು ರಾಜ್ಯ ವಿಪತ್ತು ನಿರ್ವಹಣಾ ಪಡೆ(ಎಸ್‌ಡಿಆರ್‌ಎಫ್), ಪೊಲೀಸರು ಮತ್ತು ಇತರ ತಂಡಗಳು ನಡೆಸುತ್ತಿವೆ. ಮೃತಪಟ್ಟವರು ಮತ್ತು ಗಾಯಗೊಂಡವರ ಗುರುತು ಪತ್ತೆ ಮಾಡಲಾಗುತ್ತಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಬಸ್‌ನಲ್ಲಿ ಗುಜರಾತಿ ಯಾತ್ರಾರ್ಥಿಗಳಿದ್ದರು ಎಂದು ಹೇಳಿದ್ದಾರೆ.
ಅಪಘಾತದಲ್ಲಿ 7 ಜನರ ಸಾವಿಗೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸಂತಾಪ ವ್ಯಕ್ತಪಡಿಸಿದ್ದಾರೆ. ಮತ್ತು ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.
ಗಾಯಾಳುಗಳ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಮಾಡುವುದರ ಜೊತೆಗೆ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿರುವುದಾಗಿ ಧಾಮಿ ತಿಳಿಸಿದ್ದಾರೆ.