ಮಾಹ್ಸಾ ಅಮಿನಿ ಅವರನ್ನು ನೈತಿಕ ಪೊಲೀಸರು ಬಂಧಿಸಿದ ನಂತರ ಭುಗಿಲೆದ್ದ ಪ್ರತಿಭಟನೆಗಳ ಮೇಲೆ ಇರಾನ್ ಭದ್ರತಾ ಪಡೆಗಳ ದಮನದಲ್ಲಿ ಕನಿಷ್ಠ 31 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಓಸ್ಲೋ ಮೂಲದ ಸರ್ಕಾರೇತರ ಸಂಸ್ಥೆ ಗುರುವಾರ ತಿಳಿಸಿದೆ.
ಪೊಲೀಸರ ಬಂಧನದಲ್ಲಿದ್ದ ಮಾಹ್ಸಾ ಅಮಿನಿ ಮೃತಪಟ್ಟ ನಂತರ ಇರಾನ್ ನಲ್ಲಿ ಆಕ್ರೋಶ ಭುಗಿಲೆದ್ದಿದ್ದು, ತೀವ್ರ ಪ್ರತಿಭಟನೆ ನಡೆಯುತ್ತಿವೆ. ಪ್ರತಿಭಟನೆಗಳನ್ನು ಹತ್ತಿಕ್ಕುವ ಸಂದರ್ಭದಲ್ಲಿ ಕನಿಷ್ಠ 31 ಜನ ಸಾವನ್ನಪ್ಪಿದ್ದಾರೆ.
ಇರಾನ್ ಜನ ತಮ್ಮ ಮೂಲಭೂತ ಹಕ್ಕುಗಳು ಮತ್ತು ಘನತೆಗಾಗಿ ಬೀದಿಗೆ ಬಂದಿದ್ದಾರೆ. ಶಾಂತಿಯುತ ಪ್ರತಿಭಟನೆಗೆ ಸರ್ಕಾರ ಗುಂಡುಗಳ ಮೂಲಕ ಪ್ರತಿಕ್ರಿಯಿಸುತ್ತಿದೆ ಎಂದು ಇರಾನ್ ಮಾನವ ಹಕ್ಕುಗಳ(ಐಹೆಚ್‌ಆರ್) ನಿರ್ದೇಶಕ ಮಹಮೂದ್ ಅಮಿರಿ-ಮೊಗದ್ದಮ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರತಿಭಟನೆಗಳು ಮೊದಲು ಉತ್ತರ ಪ್ರಾಂತ್ಯದ ಕುರ್ದಿಸ್ತಾನ್‌ನಲ್ಲಿ ಭುಗಿಲೆದ್ದವು, ಈಗ ದೇಶಾದ್ಯಂತ ವ್ಯಾಪಿಸಿವೆ.