ಕ್ವೆಟ್ಟಾ(ಪಾಕಿಸ್ತಾನ): ದಕ್ಷಿಣ ಪಾಕಿಸ್ತಾನದಲ್ಲಿ ಭೂಕಂಪ ಸಂಭವಿಸಿ ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ. 200 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರದ ಮಹಾನಿರ್ದೇಶಕ ನಾಸೀರ್ ನಾಸಿರ್ ತಿಳಿಸಿದ್ದಾರೆ.
ಜನರು ನಿದ್ರಿಸುತ್ತಿದ್ದಾಗ ಗುರುವಾರ ಮುಂಜಾನೆ 5.7 ತೀವ್ರತೆಯ ಭೂಕಂಪ ಸಂಭವಿಸಿದೆ. ಮೃತರು ಹೆಚ್ಚಾಗಿ ಮಹಿಳೆಯರು ಮತ್ತು ಮಕ್ಕಳು ಎಂದು ರಕ್ಷಣಾ ಕಾರ್ಯಕರ್ತರು ತಿಳಿಸಿದ್ದಾರೆ.
ಕ್ವೆಟ್ಟಾದ ಪೂರ್ವಕ್ಕೆ 102 ಕಿಮೀ ನಷ್ಟು ದೂರದಲ್ಲಿ 20 ಕಿಮೀ ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ದಾಖಲಾಗಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೇ(ಯುಎಸ್‌ಜಿಎಸ್) ಹೇಳಿದೆ.
ಸರ್ಕಾರಿ ಕಟ್ಟಡಗಳು ಸೇರಿದಂತೆ 100 ಕ್ಕೂ ಹೆಚ್ಚು ಮಣ್ಣಿನ ಮನೆಗಳು ಕುಸಿದಿವೆ. ಹೆಚ್ಚಿನ ಸಂಖ್ಯೆಯ ಮನೆ, ಕಟ್ಟಡಗಳಿಗೆ ಹಾನಿಯಾಗಿದೆ. ನೂರಾರು ಜನ ನಿರಾಶ್ರಿತರಾಗಿದ್ದಾರೆ ಎಂದು ಹರ್ನಾಯ್ ನಗರದ ಉಪ ಆಯುಕ್ತ ಸೊಹೈಲ್ ಅನ್ವರ್ ತಿಳಿಸಿದರು.
ಭೂಕಂಪ ಸಂಭವಿಸಿದಂತೆ ಮನೆಗಳು ಅಲುಗಾಡುತ್ತಿರುವುದನ್ನು ಮತ್ತು ಲೈಟ್ ಫಿಟ್ಟಿಂಗ್‌ಗಳು ತೂಗಾಡುತ್ತಿರುವುದು ಮತ್ತು ಕತ್ತಲು ಆವರಿಸುವುದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ.
ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಕೆಲವರಿಗೆ ಫೋನ್ ಟಾರ್ಚ್ ಬೆಳಕಿನಲ್ಲಿ ಬೀದಿಯಲ್ಲಿ ಸ್ಟ್ರೆಚರ್‌ಗಳಲ್ಲಿ ಚಿಕಿತ್ಸೆ ನೀಡಲಾಗಿದೆ.
1937 ರಲ್ಲಿ 7.7-ತೀವ್ರತೆಯ ಭೂಕಂಪದಿಂದ ಕ್ವೆಟ್ಟಾದಲ್ಲಿ 60,000 ಜನ ಸಾವನ್ನಪ್ಪಿದರು, ಇದು ಇತಿಹಾಸದಲ್ಲಿ ದಾಖಲಾದ ದಕ್ಷಿಣ ಏಷ್ಯಾದಲ್ಲಿ ಸಂಭವಿಸಿದ ಅತ್ಯಂತ ಭೀಕರ ಭೂಕಂಪಗಳಲ್ಲಿ ಒಂದಾಗಿದೆ.