ಅಮೆರಿಕದ ಹೂಸ್ಟನ್ನಲ್ಲಿ ನಡೆದಿದ್ದ ಆಸ್ಟ್ರೋವರ್ಲ್ಡ್ ಸಂಗೀತ ಉತ್ಸವದಲ್ಲಿ ಕಾಲ್ತುಳಿತಕ್ಕೆ ಒಳಗಾಗಿದ್ದ ಭಾರತೀಯ ಮೂಲದ 22 ವರ್ಷದ ಟೆಕ್ಸಾಸ್ ಕೃಷಿ ಹಾಗೂ ಮೆಕಾನಿಕಲ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯ ಮೆದುಳು ನಿಷ್ಕ್ರಿಯಗೊಂಡಿದೆ. ಶುಕ್ರವಾರ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಟ 8 ಮಂದಿ ಸಾವನ್ನಪ್ಪಿದ್ದಾರೆ.
ಭಾರತಿ ಹಾಗೂ ಆಕೆಯ ಸಹೋದರಿ ನಮ್ರತಾ ಮತ್ತು ಸೋದರ ಸಂಬಂಧಿ ಮೋಹಿತ್ ಬೆಲ್ಲಾನಿ ಈ ಸಂಗೀತ ಉತ್ಸವದಲ್ಲಿ ಭಾಗಿಯಾಗಿದ್ದರು. ರಾತ್ರಿ 9 ಗಂಟೆ ಸುಮಾರಿಗೆ ಪ್ರೇಕ್ಷಕರು ವೇದಿಕೆಯ ಮುಂಭಾಗದ ಕಡೆಗೆ ನುಗ್ಗಲು ಆರಂಭಿಸುತ್ತಿದ್ದಂತೆಯೇ ಕಾಲ್ತುಳಿತ ಸಂಭವಿಸಿತ್ತು.
ಕಾಲ್ತುಳಿತದ ವೇಳೆ ಭಾರತಿ, ನಮ್ರತಾ ಹಾಗೂ ಮೋಹಿತ್ ಚೆಲ್ಲಾಪಿಲ್ಲಿಯಾಗಿದ್ದರು. ನಮ್ರತಾ ಹಾಗೂ ಮೋಹಿತ್ ಇಬ್ಬರೂ ತಮ್ಮ ಮೊಬೈಲ್ ಕಳೆದುಕೊಂಡ ಹಿನ್ನೆಲೆಯಲ್ಲಿ ಭಾರತಿಯನ್ನು ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ.
ಘಟನೆಯ ಬಗ್ಗೆ ವಿವರಣೆ ನೀಡುತ್ತಾ ಮಾತನಾಡಿದ ಮೋಹಿತ್, ಜನರು ಬೀಳಲು ಆರಂಭಿಸುತ್ತಿದ್ದಂತೆಯೇ ಒಬ್ಬರ ಮೇಲೊಬ್ಬರು ಬೀಳುವುದು ಆರಂಭವಾಯ್ತು. ಈ ಸಮಯದಲ್ಲಿ ಕಾಲ್ತುಳಿತಕ್ಕೆ ಒಳಗಾಗಿದ್ದ ಭಾರತಿ ದೇಹದಲ್ಲಿ ಆಮ್ಲಜನಕದ ಮಟ್ಟ ಕುಸಿತಗೊಂಡಿತ್ತು. ಇದೇ ಕಾರಣಕ್ಕೆ ಭಾರತಿಯ ಮೆದುಳಿನ ಸ್ಟೆಮ್ 90 ಪ್ರತಿಶತ ಊದಿಕೊಂಡಿತ್ತು ಎಂದು ಹೇಳಿದ್ದಾನೆ.
ಭಾರತಿಯನ್ನು ಹೌಸ್ಟನ್ ಮೆಥೋಡಿಸ್ಟ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಆಕೆಗೆ ಹೃದಯಾಘಾತ ಸಂಭವಿಸಿದ್ದು ಮಾತ್ರವಲ್ಲದೇ ಮೆದುಳು ಕೂಡ ನಿಷ್ಕ್ರಯಗೊಂಡಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.