ತುಮಕೂರು: ನಂಬಿಸಿ ವಂಚಿಸಿದ್ದ ಜ್ಯೋತಿಷಿಯೊಬ್ಬರನ್ನೇ ದುಷ್ಕರ್ಮಿಗಳು ಕಿಡ್ನ್ಯಾಪ್ ಮಾಡಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.
ಜ್ಯೋತಿಷಿ ರಾಮಣ್ಣ ಕಿಡ್ನ್ಯಾಪ್ ಆದವರು. ನಿಧಿ ನಿಕ್ಷೇಪ ತೋರಿಸುವುದಾಗಿ ನಂಬಿಸಿ ಜ್ಯೋತಿಷಿ ರಾಮಣ್ಣ 16 ಲಕ್ಷ ಹಣ ಪಡೆದಿದ್ದರಂತೆ. ಆದರೆ ಯಾವುದೇ ನಿಧಿ ಇರುವ ಜಾಗವನ್ನೂ ತೋರಿಸದೇ ತಪ್ಪಿಸಿಕೊಳ್ಳುತ್ತಿದ್ದರಂತೆ. ಹಣ ವಾಪಾಸ್ ಕೇಳಿದರೆ ಹಣವನ್ನೂ ಕೊಡದೇ ಎಸ್ಕೇಪ್ ಆಗುತ್ತಿದರಂತೆ. ಇದರಿಂದ ಬೇಸತ್ತು ಹಣಕೊಟ್ಟವರೇ ಜ್ಯೋತಿಷಿಯನ್ನು ಕಿಡ್ನ್ಯಾಪ್ ಮಾಡಿದ್ದಾರೆ.
ಬೈಕ್ ನಲ್ಲಿ ತೆರಳುತ್ತಿದ್ದ ಜ್ಯೋತಿಷಿ ರಾಮಣ್ಣನನ್ನು ಎರಡು ಕಾರ್ ಗಳಲ್ಲಿ ಚೇಜ್ ಮಾಡಿದ್ದ ದುಷ್ಕರ್ಮಿಗಳು ಪಾವಗಡ ಅರಣ್ಯ ಇಲಾಖೆ ಕಚೇರಿ ಎದುರು ಅಪಹರಿಸಿದ್ದರು. ಬಳಿಕ ರಾಮಣ್ಣ ಪುತ್ರನಿಗೆ ಕರೆ ಮಾಡಿ 16 ಲಕ್ಷ ಹಣವನ್ನು ಕೊಟ್ಟು ನಿಮ್ಮ ತಂದೆಯನ್ನು ಬಿಡಿಸಿಕೊಂಡು ಹೋಗಿ ಎಂದು ಹೇಳಿದ್ದರು.
ಆತಂಕಕ್ಕೊಳಗಾದ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು. ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು ಜ್ಯೋತಿಷಿ ರಾಮಣ್ಣ ಅವರನ್ನು ಬೆಂಗಳೂರಿನ ಉಳ್ಳಾಲ ಬಳಿ ರಕ್ಷಿಸಿದ್ದಾರೆ. ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಶಿವರಾಜ್ (32), ಅನಂತಕೃಷ್ಣ (21), ಆಂಧ್ರ ಮೂಲದ ಕೋತಲಗುಟ್ಟದ ನರೇಶ್ (25) ಬಂಧಿತರು. ಇನ್ನೋರ್ವ ಆರೋಪಿಗಾಗಿ ಶೋಧಕಾರ್ಯ ನಡೆಸಲಾಗುತ್ತಿದೆ.