ಲಂಡನ್: ಕೋವಿ ಶೀಲ್ಡ್ ಲಸಿಕೆಯಿಂದ ಸೈಡ್ ಎಫೆಕ್ಟ್ ಆಗುತ್ತದೆ ಎಂದು ನ್ಯಾಯಾಲಯದಲ್ಲಿ ಅಸ್ಟ್ರಾಜೆನಿಕಾ ಕಂಪನಿ ಒಪ್ಪಿಕೊಂಡಿದೆ. ರಕ್ತ ಹೆಪ್ಪುಗಟ್ಟುವಿಕೆ, ಪ್ಲೇಟ್ಲೆಟ್ ಇಳಿಕೆಯಂತಹ ಸಮಸ್ಯೆಯಾಗುವ ಸಾಧ್ಯತೆ ಎಂದು ಬ್ರಿಟನ್ ನಲ್ಲಿ ಕಂಪನಿ ಮೊದಲ ಬಾರಿಗೆ ಹೇಳಿಕೆ ನೀಡಿದೆ.
ಜಗತ್ತನ್ನೇ ತಲ್ಲಣಗೊಳಿಸಿದ್ದ ಕೊರೋನಾ ಮಹಾಮಾರಿ ತಡೆಯಲು ಅಭಿವೃದ್ಧಿಪಡಿಸಿದ್ದ ಕೋವಿಶೀಲ್ಡ್ ಲಸಿಕೆ ಅಪರೂಪದ ಅಡ್ಡ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ಬ್ರಿಟನ್ ಮೂಲದ ಅಸ್ಟ್ರಾಜೆನಿಕಾ ಕಂಪನಿ ಮೊದಲ ಬಾರಿಗೆ ಒಪ್ಪಿಕೊಂಡಿದೆ. ಇದೇ ಅಸ್ಟ್ರಾಜೆನಿಕಾ ಲಸಿಕೆಯನ್ನೇ ಭಾರತದ ಪುಣೆ ಮೂಲದ ಸೀರಮ್ ಇನ್ಸ್ಟಿಟ್ಯೂಟ್ ಕೋವಿಶೀಲ್ಡ್ ಹೆಸರಿನಲ್ಲಿ ಭಾರತದಲ್ಲಿ ಬಿಡುಗಡೆ ಮಾಡಿದ್ದು, ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈ ಲಸಿಕೆಯನ್ನು ನೀಡಲಾಗಿದೆ.
ಅಸ್ಟ್ರಾಜೆನಿಕಾ ಕಂಪನಿ, ಆಕ್ಸ್ಫರ್ಡ್ ವಿವಿ ಸಹಯೋಗದಲ್ಲಿ ಕೋವಿ ಶೀಲ್ಡ್ ಲಸಿಕೆ ಅಭಿವೃದ್ಧಿಪಡಿಸಿತ್ತು. ಈ ಲಸಿಕೆ ಪಡೆದ ಪರಿಣಾಮ ರಕ್ತ ಹೆಪ್ಪುಗಟ್ಟುವಿಕೆ ಸೇರಿದಂತೆ ಅನೇಕ ಅಡ್ಡ ಪರಿಣಾಮಗಳು ಸಂಭವಿಸಿದೆ. ಹಲವು ಸಾವು ಕೂಡ ಸಂಭವಿಸಿದೆ ಎಂದು ಆರೋಪಿಸಿ ಬ್ರಿಟನ್ ನ ವಿವಿಧ ನ್ಯಾಯಾಲಯಗಳಲ್ಲಿ ಅನೇಕ ದೂರು ಸಲ್ಲಿಕೆಯಾಗಿದ್ದವು.
ಜೇಮಿ ಸ್ಕಾಟ್ ಎಂಬುವರು ಲಸಿಕೆ ಪಡೆದ ನಂತರ ಮೆದುಳಿನಲ್ಲಿ ಶಾಶ್ವತ ಗಾಯ ಉಂಟಾಗಿದೆ ಎಂದು ಹೇಳಿದ್ದರು. ಪ್ರಕರಣದ ವಿಚಾರಣೆ ವೇಳೆ ಅಸ್ಟ್ರಾಜೆನಿಕಾ ಕಂಪನಿಯ ವಕೀಲರು ಲಿಖಿತ ಹೇಳಿಕೆ ಸಲ್ಲಿಸಿದ್ದು, ಕಂಪನಿ ಅಭಿವೃದ್ಧಿಪಡಿಸಿದ ಲಸಿಕೆಗೆ ಅಪರೂಪದ ಪ್ರಕರಣಗಳಲ್ಲಿ ಅಡ್ಡ ಪರಿಣಾಮಗಳಿಗೆ ಕಾರಣವಾಗುವುದು ನಿಜ ಎಂದು ಹೇಳಿದ್ದಾರೆ.