ಬೆಂಗಳೂರು : ದೇವಾಲಯಗಳಲ್ಲಿ ತುಂಡು ಬಟ್ಟೆಗಳನ್ನು ಧರಿಸಿ ಬರುವ ಯುವಕ ಯುವತಿಯರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯಿಸಲಾಗಿತ್ತು.ಅಂತೆಯೇ ಇಂದಿನಿಂದ ರಾಜ್ಯದ ದೇವಾಲಯಗಳು ಹಾಗೂ ಬೆಂಗಳೂರಿನ ದೇವಾಲಯಗಳಲ್ಲಿ ಭಾರತೀಯ ಉಡುಪುಗಳನ್ನು ಧರಿಸಿ ಬರುವವರಿಗೆ ಮಾತ್ರ ದೇವರ ದರ್ಶನ ಮಾಡುವ ಅವಕಾಶ ಕಲ್ಪಿಸಲಾಗುತ್ತಿದೆ.
ಹೌದು, ಇಂದಿನಿಂದ ವಸ್ತ್ರ ಸಂಹಿತೆ ಬೋರ್ಡ್ ಹಾಕುವ ಅಭಿಯಾನಕ್ಕೆ ಚಾಲನೆ ದೊರೆಯಲಿದ್ದು, ಈ ಮೂಲಕ ದೇಗುಲಗಳಿಗೆ ಅರೆಬರೆ ಬಟ್ಟೆ ಧರಿಸಿ ಬರುವವರಿಗೆ ಪ್ರವೇಶ ನಿರಾಕರಿಸಲಾಗುತ್ತದೆ. ಅರೆಬರೆ ಉಡುಪು ಧರಿಸದೇ ಭಾರತೀಯ ಉಡುಪು ಧರಿಸಿ ಬರುವವರಿಗೆ ಮಾತ್ರ ದೇವಾಲಯದೊಳಗೆ ಪ್ರವೇಶ ನೀಡಲಾಗುತ್ತದೆ. ಇಂದು ಬೆಳಿಗ್ಗೆ 11 ಗಂಟೆಗೆ ವಸಂತನಗರದ ಶ್ರೀ ಲಕ್ಷ್ಮಿ ವೆಂಕಟರಮಣ ದೇವಾಲಯದಿಂದ ಈ ವಸ್ತ್ರ ಸಂಹಿತೆ ಬೋರ್ಡ್ ಹಾಕುವ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದೆ.
ಮುಜರಾಯಿ ಇಲಾಖೆ ಈ ಬಗ್ಗೆ ಯಾವುದೇ ಆದೇಶ ಹೊರಡಿಸಿಲ್ಲ, ಆದರೆ ಆಯಾ ದೇವಸ್ಥಾನದ ಆಚಾರಸಂಹಿತೆಗೆ ಅನುಗುಣವಾಗಿ ನಿಯಮಗಳನ್ನು ಪಾಲಿಸಲಾಗುತ್ತಿದೆ.ದೇವಾಲಯಕ್ಕೆ ಚಡ್ಡಿ, ಬರ್ಮುಡಾ, ಹರಿದ ಜೀನ್ಸ್, ಎದೆ ಕಾಣುವ ಟಿಶರ್ಟ್ ಧರಿಸಿಕೊಂಡು ಬರುವಂತಿಲ್ಲ. ಮಹಿಳೆಯರು ಸ್ಕರ್ಟ್, ಮಿಡಿ, ಹರಿದ ಜೀನ್ಸ್, ಶಾರ್ಟ್ಸ್ ಹಾಕಿಕೊಂಡು ಬಂದರೆ ದೇವಸ್ಥಾನಕ್ಕೆ ಎಂಟ್ರಿ ಇರೋಲ್ಲ. ದಕ್ಷಿಣ ಕನ್ನಡ-ಉಡುಪಿಯ ಕೆಲವು ದೇವಾಲಯಗಳಲ್ಲಿ ಪುರುಷರು ಅಂಗಿ ಧರಿಸಿ ದೇವಾಲಯದ ಒಳಗ ಹೋಗುವಂತಿಲ್ಲ, ಅಂಗಿ ಹಾಗೂ ಬನಿಯನ್ ಕಳಚಿಟ್ಟು ದೇವಾಲಯ ಪ್ರವೇಶಿಸಬೇಕು.