2135ಕ್ಕೆ ಭೂಮಿಯ ನಾಶವೇ? ಬೆಣ್ಣು ಕ್ಷುದ್ರಗ್ರಹದ ಅಪ್ಪಳಿಸುವಿಕೆಯೇ ಮಾರಕ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಮುಂಚಿನಿಂದಲೂ ಭೂಮಿಯ ಆಯುಷ್ಯದ ಬಗ್ಗೆ ಬಗೆಬಗೆಯ ಸಿದ್ಧಾಂತಗಳು ಜನರ ಮಧ್ಯೆ ಇವೆ. ಮಾಯನ್ ಕ್ಯಾಲೆಂಡರ್, ಈ ನಿಟ್ಟಿನಲ್ಲಿ ಭಾರಿ ಸದ್ದು ಮಾಡಿತ್ತು. ಸದ್ಯ, ‘ಬೆಣ್ಣು ಕ್ಷುದ್ರಗ್ರಹ’ದ ಬಗ್ಗೆ ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಚರ್ಚೆಗಳು ಗರಿಗೆದರಿವೆ. 2135ನೇ ಇಸವಿಗೆ ಭೂಮಿಯ ಅತ್ಯಂತ ಸಮೀಪ ಅಥವಾ ಭೂಮಿಗೆ ತಾಗುತ್ತಲೇ ಬೆಣ್ಣು ಕ್ಷುದ್ರಗ್ರಹವು ಹಾದುಹೋಗಲಿದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಇಕಾರುಸ್ ಜರ್ನಲ್‍ನಲ್ಲಿ ಈ ಆತಂಕಕಾರಿ ವರದಿ ಪ್ರಕಟವಾಗಿದೆ.
ಅಮೆರಿಕದ ನಾಸಾದ ಒಸಿರಿಸ್-ರೆಕ್ಸ್ ಬಾಹ್ಯಾಕಾಶ ನೌಕೆಯು ಈ ಬಗ್ಗೆ ಸಂಶೋಧನೆಗೆ ಮುಂದಾಗಿ, ಕ್ಸುದ್ರಗ್ರಹದ ಒಟ್ಟಾರೆ ಗಾತ್ರವನ್ನು ನಿಖರವಾಗಿ ಪತ್ತೆ ಮಾಡಿದೆ. ಒಂದೂವರೆ ಕಿಲೋಮೀಟರ್ ಸುತ್ತಳತೆಯನ್ನು ಕ್ಷುದ್ರಗ್ರಹ ಹೊಂದಿದೆ. ಇದು ಭೂಮಿಗೆ ಹತ್ತಿರ ಅಥವಾ ತಾಗಿಕೊಂಡು ಹಾದುಹೋದಾಗ ಗುರುತ್ವಾಕರ್ಷಣ ಶಕ್ತಿಯ ಪ್ರಭಾವವು ಅದರ ಮೇಲೆ ಉಂಟಾಗಲಿದೆ. ಇದರಿಂದಾಗಿ 2200ನೇ ಇಸವಿಯ ಬಳಿಕ ಬೆಣ್ಣುವು ಭೂಮಿಗೆ ನೇರವಾಗಿಯೇ ಬಂದು ಅಪ್ಪಳಿಸುವ ಮಾರ್ಗದಲ್ಲಿ ಸಂಚರಿಸುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ.