ಬೆಂಗಳೂರು : ಮಾಜಿ ಸಿಎಂ ಕುಮಾರಸ್ವಾಮಿ ಪೆನ್ ಡ್ರೈವ್ ವಿಚಾರ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಇಂದು ಕಲಾಪದಲ್ಲಿ ಚರ್ಚೆ ನಡೆದಿದ್ದು, ಚರ್ಚೆ ಹಾಗೂ ಪ್ರಶ್ನೋತ್ತರಗಳ ಬಳಿಕ ಕಲಾಪವನ್ನು ನಾಳೆ ಮಧ್ಯಾಹ್ನ 12 ಗಂಟೆಗೆ ಮುಂದೂಡಿಕೆ ಮಾಡಲಾಯಿತು.
ನಾಳೆ ಬೆಳಗ್ಗೆ 9:30 ಕ್ಕೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ನಂತರ ಸಿದ್ದರಾಮಯ್ಯ ಬಜೆಟ್ ಮಂಡಿಸಲಿರುವ ಹಿನ್ನೆಲೆ ಕಲಾಪವನ್ನು ನಾಳೆ ಮಧ್ಯಾಹ್ನ 12 ಗಂಟೆಗೆ ಸ್ಪೀಕರ್ ಯು.ಟಿ ಖಾದರ್ ಮುಂದೂಡಿದರು.
ಕಲಾಪದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬೆಂಕಿ ಚೆಂಡಾದರು. ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಪರಸ್ಪರ ವಾಗ್ವಾದಕ್ಕಿಳಿದರು. ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿರುವ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಆರೋಪಗಳು ಹಿಟ್ ಆಂಡ್ ರನ್ ಇದ್ದಂತೆ. ಅವರು ತಾವು ಮಾಡಿದ ಯಾವ ಆರೋಪವನ್ನೂ ಈವರೆಗೆ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.ಹೆಚ್.ಡಿ. ಕುಮಾರಸ್ವಾಮಿ ಅಧಿಕಾರವಿಲ್ಲದೇ ಹತಾಶರಾಗಿದ್ದಾರೆ. ತಮ್ಮ ರಾಜಕೀಯ ಜೀವನದಲ್ಲಿ ಈವರೆಗೆ ಮಾಡಿರುವ ಯಾವುದೇ ಆರೋಪವನ್ನು ಅವರು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದಿದ್ದಾರಾ? ಕತ್ತಲಲ್ಲಿ ನಿಂತು ಕಲ್ಲೆಸೆದು ಓಡಿ ಹೋಗ್ತಾರೆ. ಅವರನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತವಿಲ್ಲ ಎಂದು ಹೇಳಿದ್ದಾರೆ.
ವಿಧಾನಸಭೆ ಕಲಾಪದಲ್ಲಿ ವರ್ಗಾವಣೆ ದಂಧೆ ವಿಚಾರ ಪ್ರತಿಧ್ವನಿಸಿದ್ದು, ವಿಪಕ್ಷಗಳು ಹಾಗೂ ಆಡಳಿತ ಪಕ್ಷದ ಸದಸ್ಯರ ನಡುವೆ ವಾಗ್ವಾದ, ಕೋಲಾಹಲ ನಡೆದಿದೆ.ವಿಧಾನಸಭೆಯಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ಜಗದೀಶ್ ಆತ್ಮಹತ್ಯೆ ಯತ್ನ ಪ್ರಕರಣ ಪ್ರಸ್ತಾಪಿಸಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ವರ್ಗಾವಣೆ ವಿಚಾರವಾಗಿಯೇ ಆತ್ಮಹತ್ಯೆಗೆ ಯತ್ನ ಎಂದು ಡೆತ್ ನೋಟ್ ಬರೆದಿಟ್ಟಿದ್ದಾಗಿ ಹೇಳಿದರು. ಅಲ್ಲದೇ ಇಂಧನ ಇಲಾಖೆಯಲ್ಲಿಯೂ ವರ್ಗಾವಣೆ ದಂಧೆ ನಡೆದಿದೆ ಎಂದು ಆರೋಪಿಸಿದರು.
ಇಂಧನ ಇಲಾಖೆಯಲ್ಲಿ ವರ್ಗಾವಣೆ ದಂಧೆ ಎಂದು ಹೇಳುತ್ತಿದ್ದಂತೆ ಇಂಧನ ಸಚಿವ ಕೆ.ಜೆ. ಜಾರ್ಜ್, ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು. ನನ್ನ ಬಳಿ ಪೆನ್ ಡ್ರೈವ್ ಇದೆ. ಇದರಲ್ಲಿ ಸಾಕ್ಷ್ಯವಿದೆ ಎಂದು ಹೆಚ್.ಡಿ.ಕೆ ಹೇಳುತ್ತಿದ್ದಾರೆ. ಸಾಕ್ಷಿ ಇದ್ದರೆ ಅದನ್ನು ಸ್ಪೀಕರ್ ಅವರಿಗೆ ನೀಡಿ ಎಂದು ಒತ್ತಾಯಿಸಿದರು. ಅನಗತ್ಯವಾಗಿ ತೇಜೋವಧೆ ಮಾಡುವ ಕೆಲಸ ಮಾಡಿದರೆ ನಮಗೂ ಹಾಗೇ ಮಾಡಲು ಬರುತ್ತದೆ ಎಂದು ಗುಡುಗಿದರು.ಪೆನ್ ಡ್ರೈವ್ ನಲ್ಲಿರುವ ಸಾಕ್ಷ್ಯ ವೀಕ್ಷಣೆಗೆ ಸದನದಲ್ಲಿ ವ್ಯವಸ್ಥೆ ಮಾಡಿ. ಸ್ಪೀಕರ್ ಒಪ್ಪಿಗೆ ಕೊಟ್ಟರೆ ಸದನದಲ್ಲೇ ಪೆನ್ ಡ್ರೈವ್ ಪ್ರದರ್ಶನ ಮಾಡುತ್ತೇನೆ ಎಂದು ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.