ಬೆಂಗಳೂರು: ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ನೂರಾರು ಕೋಟಿ ಬೆಲೆಬಾಳುವ ಜಮೀನಿನ ಹಗರಣದಲ್ಲಿ ಭಾಗಿಯಾಗಿರುವುದಾಗಿ ಆರೋಪಿಸಲಾಗಿದೆ. ಕಾಂಗ್ರೆಸ್ ಕಚೇರಿಯಲ್ಲಿ ಸಚಿವರಾದ ಜಿ. ಪರಮೇಶ್ವರ್, ಹೆಚ್.ಕೆ. ಪಾಟೀಲ್ ಅವರು ಜಂಟಿ ಸುದ್ದಿಗೋಷ್ಠಿಯಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.
ವಿಪಕ್ಷ ನಾಯಕ ಆರ್. ಅಶೋಕ್ ವಿರುದ್ಧ ದಾಖಲೆ ಬಿಡುಗಡೆ ಮಾಡಲಾಗಿದ್ದು, ನೂರಾರು ಕೋಟಿ ಬೆಲೆ ಬಾಳುವ ಜಮೀನಿನ ಹಗರಣ ನಡೆದಿದೆ. ಲೊಟ್ಟೆಗೊಲ್ಲಹಳ್ಳಿಯಲ್ಲಿ ಸರ್ವೆ ನಂಬರ್ 10/1ರಲ್ಲಿರುವ 32 ಗುಂಟೆ ಜಮೀನು ಹಗರಣ ನಡೆದಿದೆ ಎಂದು ಹೇಳಲಾಗಿದೆ.
1977ರ ಫೆಬ್ರವರಿಯಲ್ಲಿ ಭೂಸ್ವಾಧೀನಕ್ಕೆ ಬಿಡಿಎನಿಂದ ಮೊದಲ ನೋಟಿಫಿಕೇಶನ್, ಪ್ರಾಥಮಿಕ ಅಧಿಸೂಚನೆ 1977ರಲ್ಲಿ ಅಂತಿಮ ಅಧಿಸೂಚನೆ 1978 ರಲ್ಲಿ ಆಗಿತ್ತು. ಅದಾದ ನಂತರ 2013ರ ವರೆಗೆ ಏನು ಆಗಿರಲಿಲ್ಲ. ರಾಮಸ್ವಾಮಿ ಎಂಬುವವರು ಈ ಜಮೀನಿನ ಮೂಲ ಮಾಲೀಕರಾಗಿದ್ದಾರೆ. ಬಿಡಿಎ ನೋಟಿಫಿಕೇಶನ್ ಆಗಿ 2003 ರಿಂದ 2007 ರವರೆಗೆ ಏನೂ ಆಗಿರಲಿಲ್ಲ. ಯಾವುದೇ ಟ್ರಾನ್ಸಾಕ್ಷನ್ ಕೂಡ ಆಗಿಲ್ಲ. ಬಿಡಿಎ ಸ್ವತ್ತಾಗಿಯೇ ಅದು 2003ರ ವರೆಗೂ ಇತ್ತು. 2003ರಲ್ಲಿ, 2007ರಲ್ಲಿ ಅಶೋಕ್ ಎರಡು ಜಮೀನು ಖರೀದಿಸುತ್ತಾರೆ. ಮೂಲ ಮಾಲೀಕ ರಾಮಸ್ವಾಮಿಯಿಂದ ಅಶೋಕ ಜಮೀನು ಖರೀದಿ ಮಾಡುತ್ತಾರೆ.
ಆರ್. ಅಶೋಕ್ ಸರ್ಕಾರಿ ಜಮೀನು ಕಬಳಿಸಿದ್ದಾರೆ. ಬಿಡಿಎ ಜಮೀನನ್ನು ತೆಗೆದುಕೊಂಡಿದ್ದಾರೆ. ಬಳಿಕ ಅನಿವಾರ್ಯವಾಗಿ ಅದನ್ನು ವಾಪಸ್ ಮಾಡಿದ್ದಾರೆ. ಅದು ಅಶೋಕ್ ಅವರಿಗೆ ಸೇರಿದ ಭೂಮಿ ಅಲ್ಲವೇ ಅಲ್ಲ. ಕೇಸು ಹಾಕಿದ ಕೂಡಲೇ ಅದನ್ನು ವಾಪಸ್ ಕೊಟ್ಟಿದ್ದಾರೆ. ದೀರ್ಘಾವಧಿ ಅದನ್ನು ಉಪಯೋಗಿಸಿಕೊಂಡು ಜಮೀನು ವಾಪಾಸ್ ಮಾಡಿದ್ದಾರೆ ಎಂದು ಹೆಚ್.ಕೆ. ಪಾಟೀಲ್ ಹೇಳಿದ್ದಾರೆ.