ಬೆಳಗಾವಿ: ರಾಜ್ಯದಲ್ಲಿ ಆನ್ಲೈನ್ ರಮ್ಮಿ, ಬೆಟ್ಟಿಂಗ್, ಗೇಮಿಂಗ್ ಆ್ಯಪ್ ನಿಷೇಧಕ್ಕೆ ವಿಧಾನಸಭೆಯಲ್ಲಿ ಸದಸ್ಯರು ಒತ್ತಾಯಿಸಿದ್ದಾರೆ.
ಆನ್ಲೈನ್ ರಮ್ಮಿ ಗೇಮ್ ಗೆ ತಂದ ತಡೆಯಾಜ್ಞೆ ತೆರವು ಮಾಡಿಸಲು ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಒತ್ತಾಯಿಸಿದ್ದಾರೆ. ವಿಧಾನಸಭೆಯಲ್ಲಿ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಉತ್ತರ ನೀಡಿದ್ದು, ಆನ್ಲೈನ್ ರಮ್ಮಿ, ಬೆಟ್ಟಿಂಗ್ ಅಪ್ಲಿಕೇಶನ್ ಗಳಿಗೆ ಯಾವುದಕ್ಕೂ ಲೈಸೆನ್ಸ್ ಇಲ್ಲ. ಲೈಸೆನ್ಸ್ ಇಲ್ಲದೆ ಈ ಅಪ್ಲಿಕೇಶನ್ ಗಳು ಕಾರ್ಯ ನಿರ್ವಹಣೆ ಮಾಡುತ್ತಿವೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಐವರು, ವಿಜಯನಗರದಲ್ಲಿ ಒಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂತಹ ಅಪ್ಲಿಕೇಶನ್ ಗಳ ಮೇಲೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಕೇಸ್ ಗಳನ್ನು ದಾಖಲಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ಪೂರಕ ಕಾನೂನು ತರುತ್ತೇವೆ. ದುಡ್ಡು ಇರುವವರು ಹಾಗೂ ಟೆಕ್ಕಿಗಳೇ ಹೆಚ್ಚಾಗಿ ಆನ್ಲೈನ್ ಬೆಟ್ಟಿಂಗ್ ಅಪ್ಲಿಕೇಶನ್ ಗಳಿಗೆ ಬಲಿಯಾಗುತ್ತಿದ್ದಾರೆ. ದೊಡ್ಡ ನಟರೇ ಜಾಹೀರಾತಿನಲ್ಲಿ ಇದ್ದಾರೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಸೈಬರ್ ಅಪರಾಧಗಳನ್ನು ತಡೆಯಲು ಕ್ರಮ ವಹಿಸಲಾಗಿದೆ. ಸೈಬರ್ ಅಪರಾಧಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಜಿಲ್ಲಾ ಮಟ್ಟದಲ್ಲಿಯೂ ಕಮಾಂಡ್ ಸೆಂಟರ್ ಸ್ಥಾಪಿಸಲಾಗಿದೆ. ರಾಜ್ಯದಲ್ಲಿ 43 ಸೆನ್ ಪೋಲಿಸ್ ಠಾಣೆಗಳನ್ನು ಸ್ಥಾಪಿಸಲಾಗಿದೆ. ಪ್ರತ್ಯೇಕ ಡಿಜಿಪಿ ನೇಮಕಾತಿ ಆದೇಶ ಶೀಘ್ರದಲ್ಲಿಯೇ ಹೊರಡಿಸುತ್ತೇವೆ ಎಂದು ಪರಮೇಶ್ವರ್ ಉತ್ತರ ನೀಡಿದ್ದಾರೆ.