
ರಸ್ತೆ ಮೇಲೆ ಹಾಕಿದ್ದ ಅಡಿಕೆ ಸಿಪ್ಪೆ ತೆಗೆದಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬ ಮಹಿಳೆ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿರುವ ಘಟನೆ ಶಿವಮೊಗ್ಗ ಜಿಲ್ಲೆ, ಹೊಸನಗರ ತಾಲೂಕಿನ ಇಟ್ಟಕ್ಕಿ ಗ್ರಾಮದಲ್ಲಿ ನಡೆದಿದೆ.
ಭಾಗೀರಥಿ ಹಲ್ಲೆಗೊಳಗಾದ ಮಹಿಳೆಯಾಗಿದ್ದು, ಇವರು ಹಸಿ ಅಡಿಕೆಯನ್ನು ಬೇರೆಡೆಯಿಂದ ತರಿಸಿಕೊಂಡು ಅದನ್ನು ಸುಲಿದು ಕೊಡುವ ಮೂಲಕ ಜೀವನ ನಿರ್ವಹಿಸುತ್ತಿದ್ದರು.
ಸುಲಿದ ಅಡಿಕೆ ಸಿಪ್ಪೆಯನ್ನು ಅವರು ಮನೆ ಮುಂದಿನ ರಸ್ತೆಯಲ್ಲಿ ಸುರಿದಿದ್ದು, ಇದರಿಂದ ಆಕ್ರೋಶಗೊಂಡಿದ್ದ ಅದೇ ಗ್ರಾಮದ ನಿವಾಸಿ, ಧರ್ಮರಾವ್ ಎಂಬಾತ ಅವಾಚ್ಯ ಶಬ್ದಗಳಿಂದ ನಿಂದಿಸಿ ದೊಣ್ಣೆಯಿಂದ ತಲೆಗೆ ಹೊಡೆದಿದ್ದಾನೆ.
ಇದರಿಂದಾಗಿ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಹೊಸನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.