ಗುವಾಹಟಿ: ತನ್ನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ವ್ಯಕ್ತಿಯನ್ನು ವಂಚನೆ ಆರೋಪದ ಮೇಲೆ ಕಳೆದ ತಿಂಗಳು ಬಂಧಿಸಿದ್ದ ಅಸ್ಸಾಂ ಪೊಲೀಸ್ ಅಧಿಕಾರಿ ಜುನ್ಮೋನಿ ರಾಭಾ ಅವರನ್ನು ನಿನ್ನೆ ಭ್ರಷ್ಟಾಚಾರದ ಆರೋಪದ ಮೇಲೆ ಬಂಧಿಸಲಾಗಿದೆ.
ಅಸ್ಸಾಂನ ನಾಗಾಂವ್ ಜಿಲ್ಲೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿರುವ ಲೇಡಿ ಸಿಂಗಂ ಖ್ಯಾತಿಯ ಎಂ.ಎಸ್. ರಾಭಾ ಅವರನ್ನು ಎರಡು ದಿನಗಳ ಕಾಲ ವಿಚಾರಣೆ ನಡೆಸಿದ ನಂತರ ಬಂಧಿಸಲಾಗಿದೆ. ಮಜುಲಿ ಜಿಲ್ಲೆಯ ನ್ಯಾಯಾಲಯ ಆಕೆಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.
ಇಬ್ಬರು ಗುತ್ತಿಗೆದಾರರು ಪೊಲೀಸರಿಗೆ ದೂರು ನೀಡಿ, ರಾಭಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ರಾಣಾ ಪೊಗಾಗ್ ಅವರೊಂದಿಗೆ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ವಂಚನೆ ಮಾಡಿರುವುದಾಗಿ ಆರೋಪಿಸಿದ್ದರು.
ಒ.ಎನ್.ಜಿ.ಸಿ.ಯಲ್ಲಿ ಉದ್ಯೋಗ ಮತ್ತು ಗುತ್ತಿಗೆ ನೀಡುವುದಾಗಿ ಭರವಸೆ ನೀಡಿ ಕೆಲವರಿಗೆ ವಂಚಿಸಿದ್ದಾರೆ ಎಂದು ಆರೋಪಿಸಿ ರಾಭಾ ಅವರು ಪೊಗಾಗ್ ವಿರುದ್ಧ ಎಫ್ಐಆರ್ ದಾಖಲಿಸಿ ವಂಚನೆ ಆರೋಪದ ಮೇಲೆ ಆತನನ್ನು ಬಂಧಿಸಿದ್ದು, ಮಜುಲಿ ಜೈಲಿನಲ್ಲಿದ್ದಾನೆ. ಪೊಗಾಗ್ ಅವರ ಪರವಾಗಿ ಹಣವನ್ನು ಸಂಗ್ರಹಿಸಿದ ಆರೋಪಗಳ ಕುರಿತು ತನಿಖೆಗೆ ಆದೇಶಿಸಲಾಗಿದೆ.
ರಾಭಾ ಅವರು ಕಳೆದ ವರ್ಷ ಅಕ್ಟೋಬರ್ನಲ್ಲಿ ಪೊಗಾಗ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ವರ್ಷದ ನವೆಂಬರ್ ನಲ್ಲಿ ಮದುವೆಯಾಗಲು ನಿರ್ಧರಿಸಿದ್ದರು. ಈಗ ಭ್ರಷ್ಟಾಚಾರ ಆರೋಪದಡಿ ಜೈಲು ಸೇರಿದ್ದಾರೆ.