ಅಸ್ಸಾಂನ ನಾಗಾನ್ ಜಿಲ್ಲೆಯ ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿದ್ದು, ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ 10 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ 6 ಮಹಿಳೆಯರು ಸೇರಿದ್ದಾರೆ. ಅಲ್ಲದೆ, ಮನೆಯ ಮಾಲೀಕನನ್ನು ಕೂಡ ಬಂಧಿಸಲಾಗಿದೆ.
ಲಖಿನಗರ ಚರಿಯಾಲಿಯ ನಿವಾಸಿ ಮೃದು ಪವನ್ ಸೈಕಿಯಾ ಮನೆಯಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸಲಾಗುತ್ತಿದ್ದು, ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ದಂಧೆಯಲ್ಲಿ ತೊಡಗಿದ್ದವರನ್ನು ರೆಡ್ ಹ್ಯಾಂಡಾಗಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ವೇಶ್ಯಾವಾಟಿಕೆ ದಂಧೆ ನಡೆಯುತ್ತಿದ್ದ ಮನೆಯಲ್ಲಿ ಕೆಲವು ಕಾಲೇಜು ವಿದ್ಯಾರ್ಥಿಗಳು ಬಾಡಿಗೆಗೆ ರೂಂ ಮಾಡಿಕೊಂಡಿದ್ದಾರೆ. ದಾಳಿಯ ಸಂದರ್ಭದಲ್ಲಿ 70 ಸಾವಿರ ರೂಪಾಯಿ ನಗದು ಹಾಗೂ ಅನೇಕ ಆಕ್ಷೇಪಾರ್ಹ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದ್ದು, ಮನೆಯಲ್ಲಿ ಬಾಡಿಗೆಗೆ ಇರುವ ಹಲವರನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಸ್ಸಾಂ ನ ಬಾರ್ಪೇಟಾ ಜಿಲ್ಲೆಯ ಸಿಯಾಲ್ಮರಿ ಪ್ರದೇಶದ ಮನೆಯೊಂದರಲ್ಲಿ ಲೈಂಗಿಕ ದಂಧೆಯಲ್ಲಿ ತೊಡಗಿದ್ದವರನ್ನು ಬಂಧಿಸಲಾಗಿದೆ. ಅಟಾಬುರ್ ರಹಮಾನ್ ಅವರ ನಿವಾಸದಲ್ಲಿ ಭಾನುವಾರ ರಾತ್ರಿ ಈ ದಾಳಿ ನಡೆಸಲಾಗಿದೆ. ಸ್ಥಳದಲ್ಲಿದ್ದ ಮೂವರು ಬಾಲಕಿಯರ ಜೊತೆಗೆ ಇಬ್ಬರು ಯುವಕರನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾಗಾನ್ ಪೊಲೀಸ್ ವರಿಷ್ಠಾಧಿಕಾರಿ ಆನಂದ್ ಮಿಶ್ರಾ ಅವರ ಪ್ರಕಾರ, ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ನಿಯಂತ್ರಣಕ್ಕೆ ಪೊಲೀಸರು ಮತ್ತಷ್ಟು ಬಿಗಿ ಕ್ರಮ ಕೈಗೊಂಡಿದ್ದಾರೆ.