ರಾಜ್ಯದಲ್ಲಿ ಯಾವುದೇ ಸರ್ಕಾರಿ ಕಾರ್ಯಕ್ರಮಗಳಿಗೆ ಅನಗತ್ಯ ವೆಚ್ಚ ಮಾಡಬಾರದು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
ಗುವಾಹಟಿಯಲ್ಲಿ ನಡೆದ ಜಿಲ್ಲಾಧಿಕಾರಿಗಳ ಸಮ್ಮೇಳನದಲ್ಲಿ ಮಾತನಾಡಿದ ಶರ್ಮಾ, ಎಲ್ಲಾ ಸರ್ಕಾರಿ ಕಾರ್ಯಕ್ರಮಗಳಲ್ಲಿ ಸಸ್ಯಾಹಾರಿ ಅಥವಾ ಸಾತ್ವಿಕ ಆಹಾರವನ್ನು ಮಾತ್ರ ನೀಡುವುದನ್ನು ಕಡ್ಡಾಯಗೊಳಿಸಿ, ಸರ್ಕಾರಿ ಕಾರ್ಯಗಳನ್ನು ಸರಳ ಮತ್ತು ಗಂಭೀರವಾಗಿ ಇಟ್ಟುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸರ್ಕಾರಿ ಕಾರ್ಯಗಳನ್ನು ಸರಳ ಮತ್ತು ಗಂಭೀರವಾಗಿ ನಡೆಸಬೇಕು. ಎಲ್ಲಾ ಸರ್ಕಾರಿ ಕಾರ್ಯಕ್ರಮಗಳಲ್ಲಿ ಅಥವಾ ಮುಖ್ಯಮಂತ್ರಿಗಳು ಅಥವಾ ಸಚಿವರು ಭೇಟಿ ನೀಡಿದಾಗ ಸಸ್ಯಾಹಾರವನ್ನು ಮಾತ್ರ ನೀಡಬೇಕು ಎಂದು ಹೇಳಿದ್ದಾರೆ.
ಆಹಾರ ಮಾರ್ಗಸೂಚಿಗಳ ಜೊತೆಗೆ, ಮುಖ್ಯಮಂತ್ರಿಯ ಭದ್ರತೆಗೆ ಸಂಬಂಧಿಸಿದ ವಾಹನಗಳು ಮತ್ತು ಬ್ಯಾರಿಕೇಡ್‌ಗಳ ಸಂಖ್ಯೆಯನ್ನು ಕಡಿಮೆ ಮಾಡುವುದು ಸೇರಿದಂತೆ ವಿಐಪಿ ಸಂಸ್ಕೃತಿಯನ್ನು ಕೊನೆಗೊಳಿಸುವ ಕ್ರಮಗಳನ್ನು ಶರ್ಮಾ ವಿವರಿಸಿದ್ದಾರೆ. ಮುಖ್ಯಮಂತ್ರಿಗಳು ಜಿಲ್ಲೆಗೆ ಭೇಟಿ ನೀಡುವ ಸಂದರ್ಭದಲ್ಲಿ ಡಿಸಿ ಮತ್ತು ಎಸ್ಪಿ ಸೇರಿದಂತೆ 10 ಕ್ಕಿಂತ ಹೆಚ್ಚು ಕಾರುಗಳನ್ನು ಹೊಂದಿರಬಾರದು ಎಂದು ತಿಳಿಸಿದ್ದಾರೆ.