ಗುವಾಹಟಿ: ಅಸ್ಸಾಂ ಸರ್ಕಾರ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ಹೊಸ ಯೋಜನೆ ರೂಪಿಸಿದೆ. ಶಾಲೆಗೆ ಹೋಗುವ ವಿದ್ಯಾರ್ಥಿನಿಗೆ ಪ್ರತಿದಿನ 100 ರೂಪಾಯಿ ಪ್ರೋತ್ಸಾಹ ಧನ ನೀಡಲಾಗುವುದು.
ಶಿಕ್ಷಣ ಸಚಿವ ಹಿಮಂತ್ ಬಿಸ್ವ ಶರ್ಮಾ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಹೆಣ್ಣುಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡುವ ಸಲುವಾಗಿ ಈ ವಿಶೇಷ ಯೋಜನೆ ರೂಪಿಸಲಾಗಿದೆ. ಪ್ರತಿದಿನ ಶಾಲೆಗೆ ಹೋಗುವ ವಿದ್ಯಾರ್ಥಿನಿಗೆ 100 ರೂಪಾಯಿ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಹೇಳಿದ್ದಾರೆ.
ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರಿಗೆ ಪ್ರಗ್ಯಾನ್ ಭಾರತ್ ಯೋಜನೆಯಡಿ ಅಸ್ಸಾಂ ಸರ್ಕಾರ ಸ್ಕೂಟರ್ ವಿತರಿಸುತ್ತಿದೆ. 22,000 ದ್ವಿಚಕ್ರವಾಹನಗಳನ್ನು ವಿದ್ಯಾರ್ಥಿನಿಯರಿಗೆ ವಿತರಿಸಲಾಗುತ್ತಿದೆ. ಇದರೊಂದಿಗೆ ಪಠ್ಯಪುಸ್ತಕ ಮತ್ತು ಅಧ್ಯಯನ ಸಾಮಗ್ರಿಗಳ ಖರೀದಿಗಾಗಿ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿಯರಿಗೆ ಸರ್ಕಾರದ ಹಣ ನೀಡಲಿದೆ. ಪದವಿ ವಿದ್ಯಾರ್ಥಿಗಳಿಗೆ 1500 ರೂ., ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ 2000 ರೂ. ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.