ಕಿರು ಹಣಕಾಸು ಸಾಲ ಮನ್ನಾ ಯೋಜನೆಯನ್ನು ಅಸ್ಸಾಂ ಸರ್ಕಾರ ಘೋಷಿಸಿದೆ. ಈ ಯೋಜನೆಯು ರಾಜ್ಯದ 24 ಲಕ್ಷ ಮಹಿಳೆಯರಿಗೆ ಪ್ರಯೋಜನವನ್ನು ನೀಡುತ್ತದೆ.
ಪ್ರಮುಖ ಚುನಾವಣಾ ಭರವಸೆಯನ್ನು ಈಡೇರಿಸುವ ಪ್ರಯತ್ನದಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಮಹತ್ವಾಕಾಂಕ್ಷೆಯ ಮೈಕ್ರೋಫೈನಾನ್ಸ್ ಸಾಲ ಮನ್ನಾ ಯೋಜನೆಯನ್ನು ಭಾನುವಾರ ಘೋಷಣೆ ಮಾಡಿದ್ದಾರೆ. ಇದರಿಂದಾಗಿ ರಾಜ್ಯದಾದ್ಯಂತ ಸುಮಾರು 24 ಲಕ್ಷ ಮಹಿಳೆಯರಿಗೆ ಪ್ರಯೋಜನವಾಗಲಿದೆ.
ಶರ್ಮಾ ಅವರು ಅಸ್ಸಾಂ ಮೈಕ್ರೋ ಫೈನಾನ್ಸ್ ಇನ್ಸೆಂಟಿವ್ ಮತ್ತು ರಿಲೀಫ್ ಸ್ಕೀಮ್ 2021(AMFIRS) ಆರಂಭದ ಬಗ್ಗೆ ಮಾಹಿತಿ ನೀಡಿದ್ದಾರೆ. ಸೋನಿತ್ ಪುರ ಜಿಲ್ಲೆಯ ಐದು ಫಲಾನುಭವಿಗಳಿಗೆ ಔಪಚಾರಿಕವಾಗಿ ಚೆಕ್ ಗಳನ್ನು ಹಸ್ತಾಂತರಿಸಿದ್ದಾರೆ. ಸೋನಿತ್‌ಪುರ ಜಿಲ್ಲೆಯ 59,468 ಮಹಿಳೆಯರಿಗೆ ತಲಾ 16,000 ರೂ.ನಿಂದ 25,000 ರೂ. ವರೆಗೆ ಒಂದು ಬಾರಿ ಸಾಲ ಮನ್ನಾ ಮಾಡಲಾಗುವುದು.
ತಮ್ಮ ಸಾಲವನ್ನು ನಿಯಮಿತವಾಗಿ ಮರುಪಾವತಿ ಮಾಡುತ್ತಿರುವ ಸಾಲಗಾರರಿಗೆ ಯೋಜನೆಯ ಮೊದಲ ಹಂತದಲ್ಲಿ ಸಾಲ ಮನ್ನಾ ಮಾಡಲಾಗುವುದು. ಒಂದು ಬಾರಿ ಪ್ರೋತ್ಸಾಹಕ ಕ್ರಮವಾಗಿ 25,000 ರೂ.ವರೆಗೆ ಸಾಲ ಮನ್ನಾ ನೀಡಲಾಗುತ್ತದೆ. ಇನ್ನೆರಡು ದಿನಗಳಲ್ಲಿ ಸೋನಿತ್‌ಪುರ್, ಚರೈಡಿಯೊ, ಶಿವಸಾಗರ್, ಜೋರ್ಹತ್, ಮಜುಲಿ, ಗೋಲಾಘಾಟ್, ವೆಸ್ಟ್ ಕರ್ಬಿ ಆಂಗ್ಲಾಂಗ್ ಮತ್ತು ದಿಮಾ ಹಸಾವೊ ಜಿಲ್ಲೆಗಳ ಫಲಾನುಭವಿಗಳಿಗೆ ಖಾತೆಗೆ ಪಾವತಿದಾರರ ಚೆಕ್‌ಗಳ ಮೂಲಕ ಅರ್ಹ ಪ್ರೋತ್ಸಾಹಧನ ನೀಡಲಾಗುತ್ತದೆ.
ಮೊದಲ ಹಂತದಲ್ಲಿ ಬಡ ಮಹಿಳೆಯರು ಪಡೆದ ಕಿರುಬಂಡವಾಳ ಸಾಲವನ್ನು ಮನ್ನಾ ಮಾಡಲು ಅಸ್ಸಾಂ ಕ್ಯಾಬಿನೆಟ್ ಸೆಪ್ಟೆಂಬರ್ 30 ರಂದು 1,800 ಕೋಟಿ ರೂ. ಕಾಯ್ದಿರಿಸಿದೆ.
ಎರಡನೇ ಹಂತದಲ್ಲಿ, 90 ದಿನಗಳಿಗಿಂತ ಕಡಿಮೆ ಅವಧಿಯ ಪಾವತಿಗಳು ಮತ್ತು ಸಾಲದ ಖಾತೆಗಳನ್ನು ಅನುತ್ಪಾದಕ ಆಸ್ತಿಗಳೆಂದು ವರ್ಗೀಕರಿಸದ ಸಾಲಗಾರರಿಗೆ ಯೋಜನೆಯ ಪ್ರಯೋಜನಗಳನ್ನು ವಿಸ್ತರಿಸಲಾಗುತ್ತದೆ.
ಈ ಪ್ರಕರಣಗಳಲ್ಲಿ ರಾಜ್ಯ ಸರ್ಕಾರವು ಸಾಲಗಾರರಿಗೆ ಮೊತ್ತವನ್ನು ಪಾವತಿಸುತ್ತದೆ. ಖಾತೆಗಳು ಎನ್‌ಪಿಎ ಆಗಿರುವ ಸಾಲಗಾರರಿಗೆ ಮೂರನೇ ಹಂತದಲ್ಲಿ ರಕ್ಷಣೆ ನೀಡಲಾಗುತ್ತದೆ. ಮೌಲ್ಯಮಾಪನದ ಆಧಾರದ ಮೇಲೆ ಭಾಗಶಃ ಅಥವಾ ಪೂರ್ಣ ಪರಿಹಾರವನ್ನು ನೀಡಲು ಸರ್ಕಾರ ಪರಿಗಣಿಸುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.