ಪೊಲೀಸ್ ಜೀಪಿಗೆ ಡೀಸೆಲ್ ಹಾಕಿದ ವೇಳೆ ಅದಕ್ಕೆ ಹಣ ನೀಡದೆ ಹಾಗೆಯೇ ತೆರಳಿದ್ದ ಕಾರಣ ಕರೆ ಮಾಡಿ ಕೇಳಿದ್ದಕ್ಕೆ ಬಂಕ್ ಸಿಬ್ಬಂದಿಯನ್ನು ಠಾಣೆಗೆ ಕರೆಯಿಸಿಕೊಂಡು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ನಡೆದಿದೆ.
ಪ್ರಕರಣದ ವಿವರ: ಸೋಮವಾರದಂದು ಪೆಟ್ರೋಲ್ ಬಂಕಿನಲ್ಲಿ ಮುಂಡಗೋಡು ಠಾಣೆಯ ಕಾನ್ಸ್ಟೇಬಲ್ ಮಹಾದೇವ ಎಂಬವರು ಪೊಲೀಸ್ ಜೀಪಿಗೆ 30 ಲೀಟರ್ ಡೀಸೆಲ್ ಹಾಕಿಸಿಕೊಂಡಿದ್ದಾರೆ. ಆಗ ಬಂಕ್ ಸಿಬ್ಬಂದಿ ರಾಘು ಹಣ ಕೇಳಿದ್ದು, ಸಂಜೆ ನೀಡುವುದಾಗಿ ಹೇಳಿದ್ದಾರೆ.
ಆದರೆ ಹಣ ನೀಡದ ಕಾರಣ ರಾಘು, ಮಹಾದೇವ ಅವರಿಗೆ ಕರೆ ಮಾಡಿ ಕೇಳಿದಾಗ ಮೊಬೈಲಿನಲ್ಲಿಯೇ ಅವಾಚ್ಯ ಶಬ್ದಗಳಿಂದ ಬೈದಿದ್ದಲ್ಲದೆ ಠಾಣೆಗೆ ಬರುವಂತೆ ಹೇಳಿದ್ದಾರೆ. ಠಾಣೆಗೆ ಹೋದ ಸಂದರ್ಭದಲ್ಲಿ ರಾಘುಗೆ ಬೂಟು ಕಾಲಿನಿಂದ ಒದ್ದು ಬೆಲ್ಟ್ ನಿಂದ ಹಲ್ಲೆ ನಡೆಸಿ ಕಳುಹಿಸಿದ್ದಾರೆ ಎಂದು ಆರೋಪ ಮಾಡಲಾಗಿದೆ.