ಸಾಲದ ರೂಪದಲ್ಲಿ ಪಡೆದಿದ್ದ ಹಣವನ್ನು ಹಿಂದಿರುಗಿಸುವಂತೆ ಕೇಳಿದ ಸ್ನೇಹಿತನನ್ನೇ ಬರ್ಬರವಾಗಿ ಕೊಲೆ ಮಾಡಿದ ಆಘಾತಕಾರಿ ಘಟನೆಯೊಂದು ಮುಂಬೈನಲ್ಲಿ ನಡೆದಿದೆ.
17000 ರೂಪಾಯಿಗಾಗಿ ಈ ಕೊಲೆ ನಡೆದಿದೆ ಎನ್ನಲಾಗಿದೆ. ಸ್ನೇಹಿತನನ್ನು ಕೊಲೆ ಮಾಡಿದ್ದು ಮಾತ್ರವಲ್ಲದೇ ಆತನ ದೇಹವನ್ನು ಸಂಪೂರ್ಣ ಛಿದ್ರಗೊಳಿಸಿ ವಾಶಿಯಲ್ಲಿ ಚರಂಡಿಗೆ ಎಸೆದಿದ್ದಾರೆ.
ಆರೋಪಿಯನ್ನು ಸುಜಿತ್ಕುಮಾರ್ ಚೌಹಾಣ್ ಎಂದು ಗುರುತಿಸಲಾಗಿದೆ. ಮುಂಬೈನ ಕೋಪರ್ ಖೈರಾನೆ ನಿವಾಸಿಯಾಗಿದ್ದ ಈತ ಸ್ನೇಹಿತ ರವೀಂದ್ರ ಮಂಡೋಟಿಯಾ ಬಳಿ 17000 ರೂಪಾಯಿ ಹಣವನ್ನು ಸಾಲದ ರೂಪದಲ್ಲಿ ಪಡೆದಿದ್ದ ಎನ್ನಲಾಗಿದೆ.
ಸಾಲದ ವಿಚಾರವಾಗಿ ಈ ಇಬ್ಬರು ಸ್ನೇಹಿತರ ನಡುವೆ ಸಾಕಷ್ಟು ಬಾರಿ ವಾಗ್ವಾದ ಉಂಟಾಗಿತ್ತು. ಕಳೆದ ವಾರ ರವೀಂದ್ರನಿಗೆ ಮದ್ಯಪಾನ ಮಾಡಲು ಚೌಹಾಣ್ ಕರೆ ಮಾಡಿ ಆಹ್ವಾನ ನೀಡಿದ್ದ ಎನ್ನಲಾಗಿದೆ. ಮಂಡೋಟಿಯಾ ಮದ್ಯಪಾನ ಮಾಡುತ್ತಿದ್ದಂತೆಯೇ ಆರೋಪಿ ಆತನ ಮೇಲೆ ಹಲ್ಲೆ ನಡೆಸಿದ್ದು ಮಾತ್ರವಲ್ಲದೇ ಹರಿತವಾದ ಆಯುಧದಿಂದ ಕೊಲೆ ಮಾಡಿದ್ದಾರೆ. ಇದಾದ ಬಳಿಕ ಪೊಲೀಸರ ಕಣ್ತಪ್ಪಿಸುವ ಸಲುವಾಗಿ ಮಂಡೋಟಿಯಾ ದೇಹವನ್ನು ಮೂರು ಭಾಗಗಳಾಗಿ ಕತ್ತರಿಸಿ ಬೇರೆ ಬೇರೆ ಸ್ಥಳಗಳಲ್ಲಿ ಎಸೆಯಲಾಗಿತ್ತು.
ಎಪಿಎಂಸಿ ಪ್ರದೇಶದ ನಿವಾಸಿಗಳು ದುರ್ವಾಸನೆ ಬೀರುತ್ತಿರುವ ಬಗ್ಗೆ ದೂರು ನೀಡಿದ ಬಳಿಕವೇ ಈ ವಿಚಾರ ಭಾನುವಾರ ಬೆಳಕಿಗೆ ಬಂದಿದೆ. ಶೋಧಕಾರ್ಯದ ವೇಳೆ ಪೊಲೀಸರಿಗೆ ಎರಡು ಕೈಗಳು, ಕಾಲುಗಳು ಹಾಗೂ ತೊಡೆಯನ್ನು ಹೊಂದಿರುವ ನೀಲಿ ಬಣ್ಣದ ಪ್ಲಾಸ್ಟಿಕ್ ಚೀಲವೊಂದು ಲಭ್ಯವಾಗಿದೆ. ಈ ದೇಹದಲ್ಲಿ ತಲೆಯ ಭಾಗ ಇರಲಿಲ್ಲ. ಆದರೆ. ಮೃತ ವ್ಯಕ್ತಿಯ ಕೈಯಲ್ಲಿ ಹನುಮಂತನ ಟ್ಯಾಟೂ ಜೊತೆಗೆ ರವೀಂದ್ರ ಎಂದು ಬರೆದ ಚಿಹ್ನೆ ಇತ್ತು.
ಪತ್ತೆಯಾದ ದೇಹದ ಭಾಗಗಳನ್ನು ಪೊಲೀಸರು ಜೆಜೆ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದರಿ. ಅಲ್ಲದೇ ನಾಪತ್ತೆಯಾದ ಸಂಬಂಧ ದಾಖಲಾದ ಪ್ರಕರಣಗಳನ್ನು ಅವಲೋಕನ ಮಾಡಿದ್ದಾರೆ. ಈ ವೇಳೆ ಇದೇ ಟ್ಯಾಟೂ ಹೊಂದಿರುವ ವ್ಯಕ್ತಿಯ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ.
ಟ್ಯಾಟೂ ಮೂಲಕ ಪೊಲೀಸರು ಮೃತ ವ್ಯಕ್ತಿಯನ್ನು ರವೀಂದ್ರ ಮಂಡೋಟಿಯಾ ಎಂದು ಗುರುತಿಸಿದ್ದಾರೆ. ಇದಾದ ಬಳಿಕ ಶಂಕಿತ ಚೌಹಾಣ್ನನ್ನೂ ಬಂಧಿಸಿದ್ದಾರೆ. ವಿಚಾರಣೆ ವೇಳೆ ಚೌಹಾಣ್ ಕೊಲೆ ಮಾಡಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ.