ನವದೆಹಲಿ: ಭಾರತೀಯ ಪ್ಯಾರಾ-ಅಥ್ಲೀಟ್ಗಳು ಶನಿವಾರ ಹ್ಯಾಂಗ್ಝೌ ಏಷ್ಯನ್ ಪ್ಯಾರಾ ಗೇಮ್ಸ್ ಅಭಿಯಾನವನ್ನು ಅಭೂತಪೂರ್ವ 111 ಪದಕಗಳೊಂದಿಗೆ ಕೊನೆಗೊಳಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ಅಕ್ಟೋಬರ್ 23 ರಿಂದ 28 ರವರೆಗೆ ನಡೆದ ಹ್ಯಾಂಗ್ಝೌ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತೀಯ ಪ್ಯಾರಾ-ಅಥ್ಲೀಟ್ಗಳು 29 ಚಿನ್ನ, 31 ಬೆಳ್ಳಿ ಮತ್ತು 51 ಕಂಚಿನೊಂದಿಗೆ 111 ಪದಕಗಳನ್ನು ಗೆದ್ದಿದ್ದಾರೆ. ಚೀನಾ (521 ಪದಕಗಳು: 214 ಚಿನ್ನ, 167 ಬೆಳ್ಳಿ, 140 ಕಂಚು), ಇರಾನ್ (44 ಚಿನ್ನ, 46 ಬೆಳ್ಳಿ, 41 ಕಂಚು), ಜಪಾನ್ (42, 49, 59) ಮತ್ತು ಕೊರಿಯಾ (30, 33, 40) ನಂತರದ ಸ್ಥಾನಗಳಲ್ಲಿವೆ.
ಮೊದಲ ಪ್ಯಾರಾ ಏಷ್ಯನ್ ಗೇಮ್ಸ್ 2010 ರಲ್ಲಿ ಚೀನಾದ ಗುವಾಂಗ್ಝೌನಲ್ಲಿ ನಡೆಯಿತು, ಅಲ್ಲಿ ಭಾರತವು ಒಂದು ಚಿನ್ನ ಸೇರಿದಂತೆ 14 ಪದಕಗಳೊಂದಿಗೆ 15 ನೇ ಸ್ಥಾನ ಪಡೆಯಿತು.
2014 ಮತ್ತು 2018ರ ಆವೃತ್ತಿಗಳಲ್ಲಿ ಭಾರತ ಕ್ರಮವಾಗಿ 15 ಮತ್ತು 9ನೇ ಸ್ಥಾನ ಪಡೆದಿತ್ತು.
ಪ್ರಮುಖ ಅಂತರರಾಷ್ಟ್ರೀಯ ಬಹು-ಕ್ರೀಡಾ ಸ್ಪರ್ಧೆಯಲ್ಲಿ (ಒಲಿಂಪಿಕ್ಸ್, ಏಷ್ಯನ್ ಗೇಮ್ಸ್ ಮತ್ತು ಕಾಮನ್ವೆಲ್ತ್ ಕ್ರೀಡಾಕೂಟ) ಭಾರತವು 100 ಪದಕಗಳ ಗಡಿಯನ್ನು ದಾಟಿದ ಏಕೈಕ ಉದಾಹರಣೆಯೆಂದರೆ 2010 ರ ದೆಹಲಿ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಗೆದ್ದ 101 ಪದಕಗಳು.
ನಾವು ಇತಿಹಾಸ ನಿರ್ಮಿಸಿದ್ದೇವೆ, ನಮ್ಮ ಪ್ಯಾರಾ-ಅಥ್ಲೀಟ್ಗಳು ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಟೋಕಿಯೊಗಿಂತ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ನಲ್ಲಿ ನಾವು ಹೆಚ್ಚಿನ ಪದಕಗಳನ್ನು ಗೆಲ್ಲುತ್ತೇವೆ” ಎಂದು ಪ್ಯಾರಾಲಿಂಪಿಕ್ಸ್ ಕಮಿಟಿ ಆಫ್ ಇಂಡಿಯಾದ ಅಧ್ಯಕ್ಷೆ ದೀಪಾ ಮಲಿಕ್ ತಿಳಿಸಿದ್ದಾರೆ.