ಒಡಿಶಾ: ಹೊಸ ವರ್ಷದ ಭರ್ಜರಿ ಪಾರ್ಟಿ, ಬಾಡೂಟಕ್ಕಾಗಿ ಪೊಲೀಸ್ ಅಧಿಕಾರಿಯೊಬ್ಬ ಕುರಿ ಕದ್ದ ಘಟನೆ ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ನಡೆದಿದೆ. ಎರಡು ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಸಿಂಧೇಕೇಲಾ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್ ಪೆಕ್ಟರ್ ಸುಮನ್ ಮಲ್ಲಿಕ್ ಕುರಿ ಕದ್ದ ಪೊಲೀಸ್ ಅಧಿಕಾರಿ. ಸ್ನೇಹಿತರೊಂದಿಗೆ ಸೇರಿ ಹೊಸ ವರ್ಷಾಚರಣೆ ಭರ್ಜರಿ ಆಚರಿಸಲು ಪ್ಲಾನ್ ಮಾಡಿದ್ದ ಎಎಸ್ಐ, ಬಾಡೂಟಕ್ಕಾಗಿ ಎರಡು ಮೇಕೆಗಳನ್ನು ಕದ್ದಿದ್ದಾರೆ.
ಸಬ್ ಇನ್ಸ್ ಪೆಕ್ಟರ್ ಈ ಕೃತ್ಯ ಕುರಿ ಮಾಲೀಕನಿಗೆ ಗೊತ್ತಾಗಿದೆ. ಮಾಲೀಕ ಸಹಾಯಕ ಸಬ್ ಇನ್ಸ್ ಪೆಕ್ಟರ್ ಗೆ ತನ್ನ ಕುರಿಗಳು ವಾಪಸ್ ಕೊಡುವಂತೆ ಕೇಳಿದ್ದಾನೆ. ಆದರೆ ಅಧಿಕಾರದ ದರ್ಪದಿಂದಾಗಿ ಕುರಿಗಳನ್ನು ಹಿಂತಿರುಗಿಸದ ಅಧಿಕಾರಿ ಅವುಗಳನ್ನು ಕಡಿದು ಬಾಡೂಟ ಮಾಡಿದ್ದಾನೆ. ಎಎಸ್ಐ ನಡೆಗೆ ಅಸಮಾಧಾನ ವ್ಯಕ್ತಪಡಿಸಿರುವ ಗ್ರಾಮಸ್ಥರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬಲಂಗೀರ್ ಪೊಲೀಸ್ ವರಿಷ್ಠಾಧಿಕಾರಿ, ಎಎಸ್ಐ ನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.