ಬೆಂಗಳೂರು: ಸಿಗ್ನಲ್ ಜಂಪ್ ಮಾಡಿದ್ದನ್ನು ಪ್ರಶ್ನಿಸಿದ ಎಎಸ್ಐ ಜೊತೆ ಜಗಳವಾಡಿ ಕೊರಳಪಟ್ಟಿ ಹಿಡಿದು ಕರ್ತವ್ಯಕ್ಕೆ ಅಡ್ಡಿಪಡಿಸಿದ ಮಹಿಳೆಯನ್ನು ಬಂಧಿಸಲಾಗಿದೆ.
ಗೋವಾ ಮೂಲದ ಅಪೂರ್ವಿ ಬಂಧಿತ ಮಹಿಳೆ. ಬೆಂಗಳೂರು ಉಪ್ಪಾರಪೇಟೆ ಸಂಚಾರ ಪೊಲೀಸ್ ಠಾಣೆ ಎಎಸ್ಐ ಬಸವಯ್ಯ ಅವರು ನೀಡಿದ ದೂರಿನ ಆಧಾರದ ಮೇಲೆ ಅಪೂರ್ವಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ಬಸವಯ್ಯ ಕರ್ತವ್ಯ ನಿರ್ವಹಿಸುವಾಗ ವೇಗವಾಗಿ ಬಂದ ಕಾರ್ ಕೆಜಿ ರಸ್ತೆಯಲ್ಲಿ ಸಿಗ್ನಲ್ ಜಂಪ್ ಮಾಡಿ ಬಂದಿದೆ. ಇದನ್ನು ಗಮನಿಸಿದ ಬಸವಯ್ಯ ಕಾರ್ ತಡೆದು ನಿಲ್ಲಿಸಿ ದಂಡ ಪಾವತಿಸಲು ಸೂಚನೆ ನೀಡಿದ್ದಾರೆ. ಎಎಸ್ಐ ಜೊತೆಗೆ ಜಗಳವಾಡಿದ ಅಪೂರ್ವಿ ಅವಾಚ್ಯ ಪದಗಳಿಂದ ನಿಂದಿಸಿ ಕೊರಳಪಟ್ಟಿ ಹಿಡಿದು ರಂಪಾಟ ನಡೆಸಿದ್ದಾರೆ. ಮೊಬೈಲ್ನಲ್ಲಿ ದೃಶ್ಯ ಸೆರೆಹಿಡಿದ ಪೊಲೀಸರ ವಿರುದ್ಧ ಜಗಳವಾಡಿದ್ದು, ಈ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಅವರನ್ನು ಬಂಧಿಸಲಾಗಿದೆ.