ಬೆಂಗಳೂರು: ತಂತ್ರಜ್ಞಾನ, ಹೊಸ ಹೊಸ ಆವಿಷ್ಕಾರಗಳಿಗೆ ಎಲ್ಲರಿಗೂ ಬೆಂಗಳೂರು ಬೇಕು. ಆದರೆ ಮೂಲ ಸೌಕರ್ಯ ಕಲ್ಪಿಸಿಕೊಡುವುದು ಮಾತ್ರ ಸರ್ಕಾರಕ್ಕೆ ಬೇಕಿಲ್ಲ. ಬೆಂಗಳೂರಿನಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಮಾಜಿ ಸಚಿವ ಡಾ.ಅಶ್ವತ್ಥನಾರಾಯಣ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಐಟಿ ಸ್ಥಾನಮಾನವನ್ನು ಹೈದರಾಬಾದ್ ಸಿಂಹಾಸನದಿಂದ ಕೆಳಗಿಳಿಸುತ್ತಿದೆ. ಕಳೆದ ಹತ್ತು ವರ್ಷಗಳಿಂದ ಬೆಂಗಳೂರನ್ನು ಕಡೆಗಣಿಸಲಾಗುತ್ತಿದೆ. ನಗರವನ್ನು ಸುಧಾರಿಸಲು ಸರ್ಕಾರ ಹೆಚ್ಚಿನ ಆಸಕ್ತಿ ತೋರಬೇಕಿದೆ ಎಂಬ ಉದ್ಯಮಿ ಮೋಹನ್ ದಾಸ್ ಪೈ ಅವರ ಟ್ವೀಟ್ ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅಶ್ವತ್ಥನಾರಾಯಣ, ರಾಜ್ಯದಲ್ಲಿ ಭ್ರಷ್ಟಾಚಾರ ಸಹಿಸಲಾಗದ ಮಟ್ಟಿಗಿದೆ. ಬಿಲ್ಡರ್ ಗಳು ಕಟ್ಟಡ ಕಟ್ಟಲು ಸಿದ್ಧರಾಗುತ್ತಿಲ್ಲ. ಹೈದರಾಬಾದೇ ಆಕರ್ಷಣೀಯವಾಗಿದೆ ಎನ್ನುತ್ತಿದ್ದಾರೆ. ವ್ಯಾಪಾರ, ವ್ಯವಹಾರಕ್ಕೆ ಹೈದರಾಬಾದ್ ಉತ್ತಮ ಸ್ಥಳ ಎಂಬಂತಾಗಿದೆ. ಬೆಂಗಳೂರಿನಲ್ಲಿ 100 ಸ್ಕ್ವೇರ್ ಫೀಟ್ ನಿರ್ಮಾಣವಾದರೆ ಹೈದರಾಬಾದ್ ನಲ್ಲಿ 1000 ಸ್ಕ್ವೇರ್ ಪೀಟ್ ನಿರ್ಮಾಣವಾಗುತ್ತಿದೆ. ಸರ್ಕಾರದ ನಿರ್ಲಕ್ಷ್ಯದಿಂದಾಗಿ ಬೆಂಗಳೂರು ನಗರಕ್ಕೆ ಕಂಟಕವಾಗಿದೆ ಎಂದು ಕಿಡಿಕಾರಿದ್ದಾರೆ.
ದೇಶಕ್ಕೆ ಭರವಸೆದಾಯಕವಾದ ನಗರ ಬೆಂಗಳೂರು. ಇದನ್ನು ಉಳಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ಇನ್ನಾದರೂ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಸಂಪುಟ ಎಚ್ಚೆತ್ತುಕೊಳ್ಳಬೇಕಿದೆ ಎಂದು ಹೇಳಿದ್ದಾರೆ.